

ಬೀದರ್: ನಗರದ ವಿವಿಧೆಡೆ ಮನೆ ಕಳ್ಳತನ ಮಾಡಿದ್ದ ಅಂತಾರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಬಾಬು ಶೇಖ್ (30) ಬಂಧಿತ. ಈತ ಬಸವಕಲ್ಯಾಣ ಕೆಎಚ್.ಬಿ ಕಾಲನಿಯಲ್ಲಿ ವಾಸವಾಗಿದ್ದ.
ಕಳೆದ ತಿಂಗಳು ನಗರದ ಗುಮ್ಮೆ ಬಡಾವಣೆಯ ಪ್ರಾಧ್ಯಾಪಕ ಡಾ. ರವೀಂದ್ರ ಬಸಪ್ಪ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಬಗ್ಗೆ ಗಾಂಧಿಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದು ವಿಚಾರಣೆ ಆರಂಭಿಸಿದ ಪೊಲೀಸರು, ಬುಧವಾರ ಇಲ್ಲಿನ ಮೆರಾಜ್ ಕಾಲನಿಯಲ್ಲಿ ಅನುಮಾನಸ್ಪದ ತಿರುಗಾಡುತ್ತಿದ್ದ ಬಾಬು ಶೇಖ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿವಿಧ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿವೆ. ಗುಮ್ಮೆ ಕಾಲನಿ ಮನೆ ಕಳ್ಳತನ ಜತೆಗೆ ರಾಂಪುರೆ ಕಾಲನಿಯ ಎರಡು ಮನೆಗಳಲ್ಲಿಯೂ ಕಳ್ಳತನವನ್ನು ಮಾಡಿರುವುದು ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಎಸ್ಪಿ ನಾಗೇಶ ಡಿ.ಎಲ್. ತಿಳಿಸಿದ್ದಾರೆ.
ಬಂಧಿತನಿಂದ 5.32 ಲಕ್ಷ ರೂ. ಮೌಲ್ಯದ 9 ತೊಲಾ ಬಂಗಾರದ ಆಭರಣ ಹಾಗೂ 1100 ಗ್ರಾಂ ಬೆಳ್ಳಿಯ ಆಭರಣಗಳನ್ನು ಜಪ್ತಿ ಮಾಡಲಾಗಿದೆ. ಮಾರ್ಕೆಟ್ ವೃತ್ತ ಸಿಪಿಐ ಮಲ್ಲಮ್ಮ ಚೌಬೆ ನೇತೃತ್ವದ ತಂಡದಲ್ಲಿ ಗಾಂಧಿಗಂಜ್ ಠಾಣೆ ಪಿಎಸ್ಐ ಮಂಜನಗೌಡ ಪಾಟೀಲ್, ಪಿಎಸ್ಐ ದ್ರೋಪತಿ, ಸಿಬ್ಬಂದಿಗಳಾದ ದಿಲೀಪಕುಮಾರ, ಡೇವಿಡ್, ಸಂಜುಕುಮಾರ, ವಿಶ್ವನಾಥ, ಅಫ್ರೋಜ್, ಅಶೋಕ, ಮೋಗಪ್ಪ, ಶ್ರೀನಿವಾಸ, ರಾಜಕುಮಾರ, ಎಂ.ಡಿ.ಆರೀಪ್, ಎಂ.ಡಿ.ಇರ್ಫಾನ್, ಶಿವಕುಮಾರ ಮಹಾಜನ್ ಇದ್ದರು. ತಂಡದ ಕಾರ್ಯಕ್ಕೆ ಎಸ್ಪಿ ನಾಗೇಶ ಡಿ.ಎಲ್. ಶ್ಲಾಘಿಸಿದ್ದಾರೆ.