ಅಂತರ್ಜ್ಯೋತಿ ಹುಡುಕುವಂತರಾಗಿ: ಶ್ರೀ ಶಂಭುನಾಥ ಸ್ವಾಮೀಜಿ

ಅಂತರ್ಜ್ಯೋತಿ ಹುಡುಕುವಂತರಾಗಿ: ಶ್ರೀ ಶಂಭುನಾಥ ಸ್ವಾಮೀಜಿ
Published on

ಹಾಸನ: ನಮ್ಮವರ ಸಾವನ್ನು ಮರೆಯುವ, ಸಮಸ್ಯೆಗಳಿಂದ ಹೊರಬರುವ ನಾವು ಪುಣ್ಯದ ಕೆಲಸಗಳಲ್ಲೂ ಭಾಗಿಯಾಗುತ್ತೇವೆ. ಜೀವನದ ಸಂತೃಪ್ತಿಗೆ ಧಾರ್ಮಿಕ ತಾಣಗಳು ಬೇಕು. ಸೇವಾ ಮನೋಭಾವನೆಯು ಸಾರ್ಥಕವಾದುದು ಎಂದು ಆದಿಚುಂಚನಗಿರಿ ಹಾಸನ ಶಾಖಾಮಠದ ಶ್ರೀ ಶಂಭುನಾಥ ಸ್ವಾಮೀಜಿ ಅವರು ಹೇಳಿದರು.
ಸಕಲೇಶಪುರ ತಾಲೂಕು ತಂಬಲಗೇರಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ರೀ ಬಸವೇಶ್ವರ ಸ್ವಾಮಿಯ ದೇವಸ್ಥಾನದ ಜೀರ್ಣೋದ್ಧಾರ ಮತ್ತು ದೇವರ ಪುನರ್ ಪ್ರತಿಷ್ಠಾಪನಾ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಮನೆಗಳು ದೇವಾಲಯದಂತಿರಬೇಕು, ಸ್ವರ್ಗದ ಆಲಯಗಳಾಗಬೇಕು. ಧನ, ಆಸ್ತಿ, ಅಧಿಕಾರದ ಆಸೆಯನ್ನು ಹುಡುಕಿಕೊಂಡು ಹೋಗುವುದು ಒಳಿತಲ್ಲ. ನಮ್ಮಲ್ಲಿರುವ ಅಂತರ್ಜ್ಯೋತಿಯನ್ನು ಕಾಣುವಂತವರಾಗಬೇಕು ಎಂದು ತಿಳಿಸಿದರು.
ಚಂಗಡಹಳ್ಳಿಯ ಹೆಗ್ಗಡಹಳ್ಳಿ ಮಠದ ಶ್ರೀ ಷಡ್ಪಾವರ ಹಿತೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಮಾತನಾಡಿ, ಮಕ್ಕಳಿಗೆ ಸಂಸ್ಕಾರದ ಪಾಠವನ್ನು ಪೋಷಕರು ಕಲಿಸಬೇಕು. ಮೊಬೈಲಿನ ದಾಸರಾಗದಂತೆ ನೋಡಿಕೊಳ್ಳಬೇಕು. ಈ ಆಧುನಿಕ ಯುಗದಲ್ಲಿ ಧಾರ್ಮಿಕ ಸಂಗತಿಗಳನ್ನು ಮರೆಯಬಾರದು ಎಂದು ಹೇಳಿದರು.
ಹಾಸನ ಆಕಾಶವಾಣಿಯ ಪ್ರಸಾರ ನಿರ್ವಾಹಕರಾದ ವಿ. ಮಧುಸೂದನ್ ಮಾತನಾಡಿ, ಕೃಷಿಯಲ್ಲಿ ಏಳು ಬೀಳುಗಳು ಸಾಮಾನ್ಯ. ಆದರೆ, ಯಾವುದೇ ಕಾರಣಕ್ಕೆ ರೈತರು ಬೇಸಾಯವನ್ನು ಬಿಡಬಾರದು, ಅಭಿವೃದ್ಧಿಯ ನೆಪದಲ್ಲಿ ಆರೋಗ್ಯವನ್ನು ಕೆಡಿಸಿಕೊಳ್ಳಬಾರದು. ಸಾಂಪ್ರದಾಯಿಕ ಕ್ರಮಗಳನ್ನು ಬದಿಗಿಡಬಾರದು. ಮಲೆನಾಡಿನಲ್ಲಿ ಕಡಿಮೆಯಾಗುತ್ತಿರುವ ಭತ್ತದ ತಳಿಗಳ ವೈವಿಧ್ಯತೆಯ ವಿಚಾರದಲ್ಲಿ ರೈತರು ಗಮನಹರಿಸಿ ಸಂರಕ್ಷಣೆಯ ಕೆಲಸಗಳಿಗೆ ಕೈಹಾಕಬೇಕು. ವಿಷಗಳ ಬಳಕೆಗೆ ಕಡಿವಾಣ ಹಾಕಬೇಕು ಎಂದು ಸಲಹೆ ನೀಡಿದರು.
ಹಾಸನ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ವಿಜಯ್ ಅಂಗಡಿಯವರು ತಂಬಲಗೇರಿಯ ಇತಿಹಾಸವನ್ನು ಪ್ರಸ್ತಾಪಿಸಿದರು.ಉದ್ಯಮಿ ಪ್ರತಾಪ್ ಗೌಡ, ಟಿ ಜಿ ಹೊನ್ನಪ್ಪ ಗೌಡ, ದಿವಾಕರ್, ಗೊದ್ದು ಲೋಕೇಶ್, ಮುದ್ದುಕೃಷ್ಣ ಗೊದ್ದು, ಕಡೂರಿನ ನಲ್ಲೂರು ಶ್ರೀನಿವಾಸ್, ಸುಮಾ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net