ಅಂತರ್ಜಲ ಹೆಚ್ಚಳಕ್ಕೆ ಜನರ ಸಹಕಾರ ಅಗತ್ಯ

05-GPT-2
ಗುಂಡ್ಲುಪೇಟೆ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಸಣ್ಣನೀರಾವರಿ ಇಲಾಖೆ ಹಾಗೂ ಅಟಲ್ ಭೂಜಲ್ ಯೋಜನೆ ವತಿಯಿಂದ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ನಿರಂಜನ್ ಉದ್ಘಾಟಿಸಿದರು. ನಾಗಭೂಷಣ್, ನಿಶ್ಚಲಾ, ಶಿಲಾವತಿ, ಶಾಂತರಾಜು ಮತ್ತಿತರರು ಹಾಜರಿದ್ದರು.
Published on

ಚಾಮರಾಜನಗರ: ಕುಸಿದಿರುವ ತಾಲೂಕಿನ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಸಮುದಾಯದ ಸಹಭಾಗಿತ್ವ ಅತ್ಯವಶ್ಯಕವಾಗಿದೆ ಎಂದು ಸಣ್ಣನೀರಾವರಿ ಇಲಾಖೆ ಜಿಲ್ಲಾ ಅಧಿಕಾರಿ ಹಾಗೂ ಅಟಲ್ ಭೂಜಲ್ ಯೋಜನೆಯ ನೋಡಲ್ ಅಧಿಕಾರಿ ನಿರಂಜನ್ ಹೇಳಿದರು.

ಗುಂಡ್ಲುಪೇಟೆ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಸಣ್ಣ ನೀರಾವರಿ ಇಲಾಖೆ ಹಾಗೂ ಅಟಲ್ ಭೂಜಲ್ ಯೋಜನೆಯ ವತಿಯಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ಅತಿ ಹೆಚ್ಚು ಅಂತರ್ಜಲ ಬಳಕೆ ಮಾಡಿಕೊಂಡ ತಾಲೂಕುಗಳಲ್ಲಿ ಗುಂಡ್ಲುಪೇಟೆಯೂ ಸೇರಿದೆ. ಆದ್ದರಿಂದ, ಕೇಂದ್ರ ಸರ್ಕಾರ ಅಟಲ್ ಭೂಜಲ್ ಯೋಜನೆಯಲ್ಲಿ ಅಂತರ್ಜಲ ಹೆಚ್ಚಳಕ್ಕೆ ಚೆಕ್ ಡ್ಯಾಂ ನಿರ್ಮಾಣ, ಬದು ನಿರ್ಮಾಣ, ಮಳೆ ನೀರು ಇಂಗಿಸುವುದು, ಸಮುದಾಯಗಳ ಸಹಭಾಗಿತ್ವ, ನೀರಿನ ಮಿತಬಳಕೆ, ಕಡಿಮೆ ನೀರಿನಲ್ಲಿ ಬೆಳೆ ಬೆಳೆಯುವ ಪದ್ಧತಿಗಳ ಬಗ್ಗೆ ಅಧ್ಯಯನ ಮಾಡಿದೆ. ನಾನಾ ಇಲಾಖೆಗಳ ಯೋಜನೆಗಳಿಗೆ ಮಾರ್ಗದರ್ಶನ ನೀಡುವ ಜತೆಗೆ ಸಾರ್ವಜನಿಕರಲ್ಲಿ ಆರಿವು ಮೂಡಿಸುತ್ತಿದೆ. ಗ್ರಾಮ ಪಂಚಾಯಿತಿಗಳೂ ಸಹಾ ನರೇಗಾ ಯೋಜನೆಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳುವ, ಜನರಲ್ಲಿ ಅರಿವು ಮೂಡಿಸುವ ಜತೆಗೆ ಅಂತರ್ಜಲ ಹೆಚ್ಚಳಕ್ಕೆ ಪೂರಕ ಕ್ರಮ ಅನುಸರಿಸಬೇಕು ಎಂದು ತಿಳಿಸಿದರು.

ನರೇಗಾ ವಿಭಾಗದ ಸಹಾಯಕ ನಿರ್ದೇಶಕ ನಾಗಭೂಷಣ್, ಅಟಲ್ ಭೂಜಲ್ ಯೋಜನೆಯ ಸಂತೋಷ್, ನಿಶ್ಚಲಾ, ತಾಲೂಕು ಪಂಚಾಯಿತಿ ವ್ಯವಸ್ಥಾಪಕಿ ಶಿಲಾವತಿ, ಕೋಟೆಕೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಾಂತರಾಜು ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net