ಅಂತರ್ಜಲ ಸುಧಾರಣೆಗೆ ಅಟಲ್ ಭೂ ಜಲ, ಜಿಲ್ಲೆಯಲ್ಲಿ 102 ಕೊಳವೆಬಾವಿಗಳ ಪರೀಕ್ಷೆ, 5 ವರ್ಷದ ಪೈಲಟ್ ಯೋಜನೆ

bhumi
Published on

ಬೆಂಗಳೂರು ಗ್ರಾಮಾಂತರ: ಅಂತರ್ಜಲಮಟ್ಟ ಸುಧಾರಿಸುವ ಹಾಗೂ ರೈತರ ವರಮಾನ ಹೆಚ್ಚಿಸುವ ಮಹತ್ವದ ಗುರಿ ಹೊಂದಿರುವ ಕೇಂದ್ರದ ಅಟಲ್ ಭೂ ಜಲ ಯೋಜನೆಯಡಿ ಗ್ರಾಮಾಂತರ ಜಿಲ್ಲೆಯಲ್ಲಿ ಕೊಳವೆಬಾವಿಗಳಿಗೆ ಟೆಲಿಮೀಟರ್ ಅಳವಡಿಸಿ ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಯಶ ಕಂಡಿದೆ.

ಕರ್ನಾಟಕ ಸೇರಿ ದೇಶದ 7 ರಾಜ್ಯಗಳಿಗೆ ಈ ಯೋಜನೆ ವರದಾನವಾಗಿದ್ದು, ರಾಜ್ಯದಲ್ಲಿ ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಮಗಳೂರು, ಚಿತ್ರದುರ್ಗ ಮತ್ತಿತರ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಗ್ರಾಮಾಂತರ ಜಿಲ್ಲೆಯಲ್ಲಿ ನಾಲ್ಕೂ ತಾಲೂಕುಗಳ 102 ಕೊಳವೆಬಾವಿಗಳನ್ನು ಈ ಯೋಜನೆಯಡಿ ತರಲಾಗಿದ್ದು, ಗ್ರಾಮಾಂತರ ಭೂ ವಿಜ್ಞಾನ ಇಲಾಖೆ ಪರೀಕ್ಷೆಗೊಳಪಡಿಸಿದೆ. ಕೊಳವೆಬಾವಿಗಳಲ್ಲಿ ಅಂತರ್ಜಲಮಟ್ಟ ಮಾಪಕದ ಮೂಲಕ ಟೆಲಿಮೀಟರ್ ಅಳವಡಿಸಿ ಪ್ರತಿ 6 ಗಂಟೆಗೆ ಒಮ್ಮೆಯಂತೆ ಅಂತರ್ಜಲ ಮಟ್ಟದಲ್ಲಿನ ಏರುಪೇರನ್ನು ಗಮನಿಸಲಾಗುವುದು. ಈ ಮೂಲಕ ಜಿಲ್ಲೆಯಲ್ಲಿನ ಅಂತರ್ಜಲ ಮಟ್ಟದ ಕುರಿತು ಮಾಹಿತಿ ಕಲೆ ಹಾಕುವ ಜತೆಗೆ ಅಂತರ್ಜಲ ವೃದ್ಧಿಗೂ ಒತ್ತು ನೀಡಲಾಗುವುದು.

ವಿನಾಕಾರಣ ನೀರು ಪೋಲು ಬೇಡ: ಗ್ರಾಮಾಂತರ ಜಿಲ್ಲೆಯಲ್ಲಿ ಯಾವುದೇ ನದಿ ಮೂಲವಿಲ್ಲ. ಜಿಲ್ಲೆಯ ನಾಲ್ಕೂ ತಾಲೂಕುಗಳು ಕೊಳವೆಬಾವಿಗಳನ್ನೇ ಅವಲಂಬಿಸಿವೆ. ಈ ನಿಟ್ಟಿನಲ್ಲಿ ಅಟಲ್ ಭೂ ಜಲ ಯೋಜನೆ ಅವಶ್ಯವಾಗಿದ್ದು, ಗ್ರಾಮಾಂತರ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಯೋಜನೆ ಅನುಷ್ಠಾನಗೊಳಿಸಿದ್ದಾರೆ. ಹಲವು ಕಡೆ ರೈತರ ಕೊಳವೆಬಾವಿಗಳಲ್ಲಿ ಅಂತರ್ಜಲಮಟ್ಟ ಹೆಚ್ಚಿದ್ದು, ಅನವಶ್ಯಕವಾಗಿ ಜಮೀನುಗಳಲ್ಲಿ ಹರಿಸಲಾಗುತ್ತಿದೆ. ಇದರಿಂದ ಅಂತರ್ಜಲ ಬರಿದಾಗುತ್ತದೆ ಹೊರತು ಅಂತರ್ಜಲ ರೀಚಾಜರ್ ಆಗುವುದಿಲ್ಲ ಎಂಬುದು ಅಧಿಕಾರಿ ಅನಿಸಿಕೆ.

ಕೊಳವೆಬಾವಿ ಹೊಂದಿರುವ ರೈತರಲ್ಲಿ ಈ ಯೋಜನೆಯಡಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಜಮೀನುಗಳಲ್ಲಿ ಬೆಳೆಗೆ ಅವಶ್ಯವಿರುವಷ್ಟೇ ನೀರನ್ನು ಬಳಸುವಂತೆ ತಿಳಿವಳಿಗೆ ಮೂಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟೆಲಿಮೀಟರ್‌ಗೆ ಭದ್ರತೆ: ಮೊದಲಿಗೆ ಅಧ್ಯಯನಕ್ಕೊಳಪಡಿಸುವ ಕೊಳವೆಬಾವಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು, ಭದ್ರತೆ ಇರುವ ಕೊಳವೆಬಾವಿಗಳನ್ನಷ್ಟೇ ಈ ಯೋಜನೆಯಡಿ ಮಾನ್ಯ ಮಾಡಲಾಗುತ್ತಿದೆ. ಸರ್ಕಾರಿ ಶಾಲೆ, ಪಂಚಾಯಿತಿ ಕಚೇರಿ, ಸರ್ಕಾರಿ ಕಚೇರಿಗಳು ಸೇರಿ ಭದ್ರತೆ ಇರುವ ಜಾಗಗಳಲ್ಲಿ ಟೆಲಿಮೀಟರ್ ಅಳವಡಿಸಿ ಅಂತರ್ಜಲ ಮಾಪನ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಐದು ವರ್ಷಗಳ ಪೈಲಟ್ ಯೋಜನೆಯಾಗಿದ್ದು, ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿದೆ ಎನ್ನಲಾಗಿದೆ.

ಜಲಜೀವನ್ ಮಿಷನ್‌ಗೆ ಸಮನ್ವಯ: ಅಂತರ್ಜಲ ಸಂಪನ್ಮೂಲ ಈಗಾಗಲೇ ಕಡಿಮೆ ಇರುವ ನಿರ್ದಿಷ್ಟ ಪ್ರದೇಶಗಳನ್ನು ಗುರುತಿಸಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. 2024ರ ವೇಳೆಗೆ ದೇಶದ ಪ್ರತಿ ಮನೆಗೂ ನೀರು ಒದಗಿಸುವ ಉದ್ದೇಶದ ಒಂದು ಹೆಜ್ಜೆಯಾಗಿದ್ದು. ಜಲ ಜೀವನ ಮಿಷನ್ ಪ್ರತಿ ಮನೆಗಳಿಗೆ ಕೊಳವೆ ಮೂಲಕ ನೀರು ಪೂರೈಕೆ ಮಾಡಲು ಸಹಕಾರವಾಗಲಿದೆ. ಇದರ ನಡುವೆ ಅಟಲ್ ಭೂ ಜಲ ಯೋಜನೆ ಅಂತರ್ಜಲ ಕುಸಿತ ಕಂಡಿರುವ ಪ್ರದೇಶಗಳ ಬಗ್ಗೆ ವಿಶೇಷ ಗಮನ ಹರಿಸಲಿದೆ.

ಇದೊಂದು ಉತ್ತಮ ಯೋಜನೆಯಾಗಿದ್ದು, ಗ್ರಾಮಾಂತರ ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಇಲಾಖೆ ಮುಂದಾಗಿದೆ. ಜಿಲ್ಲೆಯ 102 ಪಂಚಾಯಿತಿ ವ್ಯಾಪ್ತಿಯಲ್ಲಿ ಕೊಳವೆಬಾವಿಗಳ ಮಾಪನ ಕಾರ್ಯ ನಡೆಯುತ್ತಿದೆ. ಈಗಾಗಲೇ ಕೆಲವು ಕೊಳವೆಬಾವಿಗಳಲ್ಲಿ ಅಂತರ್ಜಲ ಮಾಪನ ನಡೆಯುತ್ತಿದೆ. ಐದು ವರ್ಷದ ಪೈಲಟ್ ಯೋಜನೆ ಜಿಲ್ಲೆಯಲ್ಲಿ ಯಶ ಕಾಣಲಿದೆ ಎಂಬ ಭರವಸೆ ಇದೆ. ಪಲ್ಲವಿ ಹಿರಿಯ ಭೂ ವಿಜ್ಞಾನಿ ಬೆಂ.ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net