

ಅರಸೀಕೆರೆ: ಭೂ ಫಲವತ್ತತೆ ಕಾಪಾಡಿಕೊಳ್ಳುವ ಜತೆಗೆ ಅಂತರ್ಜಲ ಸಂರಕ್ಷಿಸುವುದು ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕು ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎ.ಪಿ.ಶಿವಕುಮಾರ್ ಹೇಳಿದರು.
ತಾಲೂಕಿನ ಜಾಜೂರು ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೈತರಿಗೆ ಕೃಷಿ ಪರಿಕರ ವಿತರಿಸಿ ಮಾತನಾಡಿದರು.
ಚಿಕ್ಕೂರು-ದುಮ್ಮೇನಹಳ್ಳಿ ಜಲಾನಯನ ಪ್ರದೇಶದಲ್ಲಿ ಅಂದಾಜು 6250 ಹೆ. ಪ್ರದೇಶದಲ್ಲಿ ಮಣ್ಣು ಮತ್ತು ನೀರು ಸಂರಕ್ಷಣಾ ಚಟುವಟಿಕೆಗಳಿಗೆ ಒತ್ತು ನೀಡಲಾಗಿದೆ. ಅಲ್ಲದೇ ಭೂ ಸಹಿತ ಹಾಗೂ ಭೂ ರಹಿತ ರೈತರ ಜೀವನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಇಲಾಖೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಹಾಲು ಕರೆಯುವ ಯಂತ್ರ, ಹುಲ್ಲು ಕತ್ತರಿಸುವ ಉಪಕರಣ, ಸೈಲೇಜ್ ಬ್ಯಾಗ್, ತರಕಾರಿ ಕಿಟ್, ಜೇನು ಸಾಕಾಣಿಕೆ ಪೆಟ್ಟಿಗೆಗಳನ್ನು ವಿತರಿಸಲಾಗುತ್ತಿದೆ. ರೈತರು ಸರ್ಕಾರದ ಸವಲತ್ತುಗಳನ್ನು ಪಡೆದು ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ಸಲಹೆ ನೀಡಿದರು.
ಇದಲ್ಲದೇ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಯೋಜನೆಯಡಿ ಸರ್ಕಾರದಿಂದ ಗರಿಷ್ಠ 15 ಲಕ್ಷ ರೂ.ಗಳವರೆಗೆ ಸಹಾಯಧನ ಲಭ್ಯವಿದ್ದು, ಯಾವುದೇ ಆಹಾರಕ್ಕೆ ಸಂಬಂಧಪಟ್ಟ ಉದ್ದಿಮೆಯನ್ನು ಪ್ರಾರಂಭಿಸಬಹುದಾಗಿದೆ. ಜತೆಗೆ ಯೋಜನೆಯಲ್ಲಿ 2 ರಿಂದ 5 ಲಕ್ಷ ರೂ. ಗಳವರೆಗೆ ಅಮೃತ್ ಸ್ಟಾಲ್ ಮಳಿಗೆಗಳನ್ನು ತೆರೆಯಲು ಸಹಾಯಧನವನ್ನು ನೀಡಲಾಗುವುದು ಎಂದು ತಿಳಿಸಿದರು.
ತಾಂತ್ರಿಕ ಅಧಿಕಾರಿ ಬೋರೆಹಳ್ಳಿ ಸೋಮಶೇಖರ್ ಮಾತನಾಡಿ, ಉತ್ಪಾದನೆ ಹಾಗೂ ಜೀವನಾಧಾರಿತ ಕೃಷಿ ಚಟುವಟಿಕೆಯಡಿ ವಿವಿಧ ಕೃಷಿ ಉಪಕರಣಗಳ ವಿತರಣೆಯೊಂದಿಗೆ ತಾಂತ್ರಿಕ ಮಾಹಿತಿಯನ್ನು ತಜ್ಞರಿಂದ ರೈತರಿಗೆ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ. ಜೇನು ಕೃಷಿಯಲ್ಲಿ ರೈತರು ಆಸಕ್ತಿ ವಹಿಸಿದಲ್ಲಿ ಹೆಚ್ಚಿನ ಲಾಭ ಗಳಿಸಬಹುದಾಗಿದ್ದು ರೈತ ಉತ್ಪಾದಕ ಕಂಪನಿಗಳಲ್ಲಿ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಜಾಜೂರು ಗ್ರಾಪಂ ಅಧ್ಯಕ್ಷೆ ರೇಖಾ ಶಶಿಧರ್, ಸದಸ್ಯ ಓಂಕಾರ ಮೂರ್ತಿ ಮಾತನಾಡಿದರು. ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಕಾಂತರಾಜು, ಕೃಷಿ ಅಧಿಕಾರಿಗಳಾದ ಪ್ರಭಾವತಿ, ದೀಪ್ತಿ ಪಾಟೀಲ್ ಇತರರು ಇದ್ದರು.