ಅಂತರ್ಜಲ ವೃದ್ಧಿಯೊಂದಿಗೆ ಗ್ರಾಮಾಭಿವೃದ್ಧಿ, ನರೇಗಾ ಸಿಬ್ಬಂದಿಗೆ ಜವಾಬ್ದಾರಿ ನಿಭಾಯಿಸುವಂತೆ ಸಿಇಒ ರವಿಕುಮಾರ್ ಸೂಚನೆ

zp
Published on

ಬೆಂಗಳೂರು ಗ್ರಾಮಾಂತರ: ಪ್ರಸಕ್ತ ವರ್ಷದ ಜಲಶಕ್ತಿ ಅಭಿಯಾನದ ನೂರು ದಿನದ ಕಾರ್ಯಕ್ರಮದಡಿ ಗ್ರಾಮೀಣ ಪ್ರದೇಶದಲ್ಲಿರುವ ಕೆರೆ, ಕುಂಟೆ, ಕಲ್ಯಾಣಿಗಳಲ್ಲಿ ಹೂಳೆತ್ತುವುದು ಹಾಗೂ ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ಮಳೆ ನೀರು ಸಂಗ್ರಹವಾಗುವಂತೆ ಮಾಡಬೇಕು. ಇದರಿಂದ ಅಂತರ್ಜಲ ವೃದ್ಧಿಯಾಗುವ ಜತೆಗೆ ಗ್ರಾಮಗಳ ಅಭಿವೃದ್ಧಿಯಾಗುತ್ತದೆ ಎಂದು ಜಿಪಂ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್ ಹೇಳಿದರು.

ದೇವನಹಳ್ಳಿ ತಾಲೂಕು ಬೀರಸಂದ್ರದ ಜಿಪಂ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಯೋಜನೆ ಯಶಸ್ವಿಯಾಗಲು ಸಿಬ್ಬಂದಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಸರ್ಕಾರದ ಆದೇಶಗಳಿಗೆ ಅನುಸಾರವಾಗಿ ಕೆಲಸ ನಿರ್ವಹಿಸಬೇಕು. ಕೆರೆ, ಕುಂಟೆಗಳಲ್ಲಿ ಹೂಳೆತ್ತುವುದು, ಬದು, ಚರಂಡಿ, ಕೃಷಿ ಹೊಂಡ ನಿರ್ಮಾಣ, ಗ್ರಾಮೀಣ ರಸ್ತೆ ಹಾಗೂ ಇತರೆ ಕಾಮಗಾರಿಗಳನ್ನು ಜವಾಬ್ದಾರಿ ವಹಿಸಿ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದರು.

ಎಲ್ಲ ಕಾಮಗಾರಿ ನಡೆಯುವ ಸ್ಥಳಗಳಿಗೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲು ಸಾಧ್ಯವಿಲ್ಲವಾದ್ದರಿಂದ ಕಾಳಜಿಯಿಂದ ಕಾಮಗಾರಿಗಳನ್ನು ತ್ವರಿತವಾಗಿ ಹಾಗೂ ಗುಣಮಟ್ಟದಿಂದ ಪೂರ್ಣಗೊಳಿಸಿದರೆ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಿದಂತಾಗುತ್ತದೆ ಎಂದು ತಿಳಿಸಿದರು.

ಎಲ್ಲರೂ ಪ್ರತಿದಿನ ಸರಿಯಾದ ಸಮಯಕ್ಕೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಹಾಜರಿರಬೇಕು ಹಾಗೂ ಕ್ರಿಯಾ ಯೋಜನೆಯ ಅನುಸಾರವಾಗಿಯೇ ಕೆಲಸ ನಿರ್ವಹಿಸಬೇಕು. ಸ್ಥಳೀಯವಾಗಿ ಯಾವುದೇ ಸಮಸ್ಯೆಗಳಿದ್ದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಸಕ್ತ ವರ್ಷ ನರೇಗಾ ಯೋಜನೆಯಲ್ಲಿ ಶೇ. 100 ಪ್ರಗತಿ ಸಾಧಿಸಬೇಕು. ಯಾವುದೇ ಹಳೆಯ ಕಾಮಗಾರಿಗಳು ಬಾಕಿ ಇದ್ದಲ್ಲಿ ಶೀಘ್ರವೇ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net