

ಬೆಂಗಳೂರು ಗ್ರಾಮಾಂತರ: ಯಾವುದೇ ಜಲಮೂಲವಿಲ್ಲದ ಗ್ರಾಮಾಂತರ ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಗೆ ಅಗತ್ಯವಿರುವ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು, ಈ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿ.ಪ್ರಸಾದ್ ಸೂಚಿಸಿದರು.
ಹೊಸಕೋಟೆ ತಾಲೂಕು ಅನುಗೊಂಡನಹಳ್ಳಿಯಲ್ಲಿ ಜಲಾಮೃತ ಯೋಜನೆಯಡಿ ಕೈಗೊಂಡಿರುವ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಶುಕ್ರವಾರ ಪರಿಶೀಲಿಸಿ ಮಾತನಾಡಿದರು. 2019-20ನೇ ವರ್ಷವನ್ನು ‘ಜಲವರ್ಷ’ ಎಂದು ಆಯವ್ಯಯದಲ್ಲಿ ೋಷಿಸಲಾಗಿದೆ. ಈ ನಿಟ್ಟಿನಲ್ಲಿ ಜಲಾಮೃತ ಯೋಜನೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಅಧಿಕಾರಿಗಳ ಕರ್ತವ್ಯ ಎಂದರು.
ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ ರಾಜ್ಯದ ಎಲ್ಲ ಜಿಲ್ಲೆಗಳ ಸಣ್ಣ ನೀರಾವರಿ ಹಾಗೂ ಜಿಲ್ಲಾ ಪಂಚಾಯತ್ ಅಧೀನದ ಕೆರೆಗಳ ವಿವರವನ್ನು ಈಗಾಗಲೇ ಎಲ್ಲ ಜಿಲ್ಲೆಗಳಿಗೆ ಪತ್ರದೊಂದಿಗೆ ರವಾನಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿನ ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ಜಲಾಮೃತ ಯೋಜನೆ ಅನುಷ್ಠಾನದ ಮಾರ್ಗಸೂಚಿ ಕೈಪಿಡಿಯ ಸೂಚನೆ ಪಾಲಿಸಿ ಕೆರೆಗಳ ಅಭಿವೃದ್ಧಿ ಕಾಮಗಾರಿ ನಡೆಸಬೇಕು. ಕೆರೆಗಳ ಅಭಿವೃದ್ಧಿಯಿಂದ ಅಂತರ್ಜಲ ವೃದ್ಧಿಸುತ್ತದೆ, ಬರಪೀಡಿತ ಜಿಲ್ಲೆಗೆ ಶಾಪವಾಗಿರುವ ನೀರಿನ ಸಮಸ್ಯೆ ತಪ್ಪಿಸುವಲ್ಲಿ ಇಂಥ ಕಾಮಗಾರಿಗಳು ಪೂರಕವಾಗಿವೆ ಎಂದರು.
ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುವ ವೇಳೆ ನಿಯಮ ಪಾಲಿಸಬೇಕು. ಜತೆಗೆ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅನುಗೊಂಡನಹಳ್ಳಿ ಕೆರೆ ಒಡೆದಿದ್ದು, ಕೂಡಲೇ ದುರಸ್ತಿ ಮಾಡಬೇಕಿದೆ. ಜತೆಗೆ ಕೆರೆಯಲ್ಲಿನ ಹೂಳು ತೆಗೆದು ಮಳೆಗಾಲದ ವೇಳೆ ನೀರಿನ ಸಂಗ್ರಹಣೆಗೆ ಅನುವು ಮಾಡಿಕೊಡಬೇಕಿದೆ ಎಂದು ಸೂಚಿಸಿದರು.