

ಶಿಡ್ಲಘಟ್ಟ: ಆರ್ಟ್ ಆಫ್ ಲಿವಿಂಗ್ ಜತೆ ಸರ್ಕಾರ ಒಪ್ಪಂದ ಮಾಡಿಕೊಂಡಿದ್ದು ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ ಸೇರಿ ರಾಜ್ಯದ 9 ಜಿಲ್ಲೆಗಳಲ್ಲಿ ಅಂತರ್ಜಲ ವೃದ್ಧಿಗೆ ಹಲವು ಕಾಮಗಾರಿ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ಸೋಮವಾರ ವೀಕ್ಷಿಸಿ ಮಾತನಾಡಿದರು, ಅಧಿಕಾರಿಗಳು ಮತ್ತು ಜನರು ನರೇಗಾ ವಿಚಾರದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ, ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ಕಾಮಗಾರಿಗಳನ್ನು ನಡೆಸುವುದು ನಮ್ಮ ಉದ್ದೇಶವಾಗಿದೆ ಎಂದರು.
ಜನರು ಕೆಲಸವಿಲ್ಲದೆ ಕಷ್ಟಪಡುತ್ತಿದ್ದಾರೆ. ನರೇಗಾದಡಿ ದುಡಿಯುವ ಕೈಗಳಿಗೆ ಕೆಲಸ ನೀಡಲಾಗುತ್ತಿದೆ. ಈಗಾಗಲೇ 6,021 ಗ್ರಾಪಂ ಪೈಕಿ 5,400 ಕ್ಕೂ ಹೆಚ್ಚು ಗ್ರಾಪಂಗಳಲ್ಲಿ ನರೇಗಾ ಕೆಲಸ ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಕುಂಬಿಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಹೇಮಾರ್ಲಹಳ್ಳಿಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಗ್ರಾಮೀಣ ಉದ್ಯಾನವನ ಉದ್ಘಾಟಿಸಿದ ಸಚಿವರು, ಸರ್ಕಾರಿ ಆಸ್ಪತ್ರೆ ಮಳೆನೀರು ಕೊಯ್ಲು, ಚೀಮಂಗಲ ಸರ್ಕಾರಿ ಪ್ರೌಢಶಾಲೆ ಕಾಂಪೌಂಡ್, ಮಳೆನೀರು ಕೊಯ್ಲು, ಮಳಮಾಚನಹಳ್ಳಿ ಗ್ರಾಪಂನ ಚಿಕ್ಕದಾಸರಹಳ್ಳಿ ಬಳಿ ನಾಲಾಬದು ನಿರ್ಮಾಣ, ಅಬ್ಲೂಡು ಗ್ರಾಪಂ ಚೀಮನಹಳ್ಳಿಯಲ್ಲಿ ಕುಂಟೆ ಕಾಮಗಾರಿ ವೀಕ್ಷಿಸಿದರು.
ಸಂಸದ ಎಸ್.ಮುನಿಸ್ವಾಮಿ, ಶಾಸಕ ವಿ.ಮುನಿಯಪ್ಪ, ಜಿಪಂ ಸದಸ್ಯೆ ತನುಜಾ ರಘು, ತಾಪಂ ಅಧ್ಯಕ್ಷೆ ಶೋಭಾ ಶಶಿಕುಮಾರ್, ಇಒ ಬಿ.ಶಿವಕುಮಾರ್, ಕುಂಬಿಗಾನಹಳ್ಳಿ ಗ್ರಾಪಂ ಅಧ್ಯಕ್ಷ ಆಂಜಿನಪ್ಪ, ಪಿಡಿಒ ನೈನಾ ನಿಖತ್ ಆರಾ, ಚೀಮಂಗಲ ಗ್ರಾಪಂ ಅಧ್ಯಕ್ಷೆ ಶ್ಯಾಮಲ, ಪಿಡಿಒ ಹರೀಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಮಲಿಂಗಪ್ಪ ಇತರರಿದ್ದರು.
ಉತ್ತರನ ಪೌರುಷ : ಡಿ.ಕೆ.ಶಿವಕುಮಾರ್ ಎಲ್ಲೆಲ್ಲೋ ಹೋಗಿ ಮಲಗಿಕೊಂಡು ಬಂದಿದ್ರು. ಆದ್ರೆ ನಮ್ಮ ಇಲಾಖೆ ಮಲಗಿಲ್ಲ ಅನ್ನೋದಕ್ಕೆ ನಾನು ಆ್ಯಕ್ಟೀವ್ ಆಗಿರೋದೆ ಸಾಕ್ಷಿ. ಸುಮ್ಮನೆ ಹೇಳಿಕೆ ಕೊಟ್ಟು ಉತ್ತರನ ಪೌರುಷ ತೋರಿಸಬೇಡಿ. ತಪ್ಪು ಮಾಡಿದ್ದರೆ ತೋರಿಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಸಚಿವ ಈಶ್ವರಪ್ಪ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು.
ಲೂಟಿ ಮಾಡುವುದರಲ್ಲಿ ಡಿಕೆಶಿ ಅನುಭವಸ್ಥರು :ನರೇಗಾ ಯೋಜನೆಯಲ್ಲಿ ಅವ್ಯವಹಾರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಡಿ.ಕೆ.ಶಿವಕುಮಾರ್ ಲೂಟಿ ಮಾಡಿದ್ರೋದಲ್ಲಿ ಅನುಭವಸ್ಥರು. ಎಲ್ಲೆಲ್ಲಿ, ಹೇಗೆ ಲೂಟಿ ಮಾಡ್ಬೇಕು ಅನ್ನೊಂದು ಅವರಿಗೆ ಗೊತ್ತು. ನಾನು ಹೊಸದಾಗಿ ಇಲಾಖೆಗೆ ಬಂದಿದ್ದೇನೆ. ಒಂದು ಪೈಸೆ ಲೂಟಿಯಾಗಿದ್ರೇ ತೋರಿಸಿ ತನಿಖೆ ಮಾಡಿಸ್ತೀನಿ ಎಂದು ಸವಾಲು ಹಾಕಿದರು. ಕೆಪಿಸಿಸಿ ಅಧ್ಯಕ್ಷ ಅಂತ ತೋರಿಸಿಕೊಳ್ಳೋಕೆ ನಾಟಕ ಮಾಡಬೇಡಿ. ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ, ಲೂಟಿ ಆಗಿರೋದು ತೋರಿಸಿದ್ರೆ ಬಿಗಿ ಮಾಡ್ತೀವಿ, ತಪ್ಪು ತಿದ್ದೀಕೊಳ್ತೀವಿ ಎಂದು ತಿರುಗೇಟು ನೀಡಿದರು.