ಅಂತರ್ಜಲ ಬಳಕೆ ಕಡಿಮೆ ಮಾಡಿ ಸ್ವಚ್ಛವಾಗಿರಿಸಿ

bhr river
ಬಾಳೆಹೊನ್ನೂರಿನಲ್ಲಿ ಭದ್ರಾ ನದಿಗೆ ಪೂಜೆ ಸಲ್ಲಿಸಲಾಯಿತು. ಜೆಸಿಐ ಅಧ್ಯಕ್ಷ ಇಬ್ರಾಹಿಂ ಶಾಫಿ, ಚೈತನ್ಯ ವೆಂಕಿ, ರವಿಚಂದ್ರ, ಕಾಶಪ್ಪ, ಸ್ಟೀಫನ್, ಅಶೋಕ, ಸುಧಾಕರ್ ಇತರರಿದ್ದರು.
Published on

ಬಾಳೆಹೊನ್ನೂರು: ನೈಸರ್ಗಿಕ ಜಲಮೂಲಗಳನ್ನು ಸಂರಕ್ಷಣೆ ಮಾಡದಿದ್ದರೆ ಭವಿಷ್ಯದಲ್ಲಿ ನೀರಿಗೆ ಹಾಹಾಕಾರ ಉಂಟಾಗಲಿದೆ ಎಂದು ಜೆಸಿಐ ಅಧ್ಯಕ್ಷ ಇಬ್ರಾಹಿಂ ಶಾಫಿ ಹೇಳಿದರು.

ಜೆಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಹಾಗೂ ಮಲೆನಾಡು ಒಳ್ಳೆಯ ಮನಸ್ಸುಗಳ ಒಕ್ಕೂಟದಿಂದ ವಿಶ್ವ ಜಲದಿನದ ಅಂಗವಾಗಿ ಭದ್ರಾ ನದಿಗೆ ಶನಿವಾರ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ನಗರೀಕರಣದ ವೇಗ ಹಾಗೂ ಜಲಮೂಲಗಳ ವಿಪರೀತ ನಾಶದ ಪರಿಣಾಮವಾಗಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ ಎಂದರು.

ಶತಮಾನಗಳ ಹಿಂದೆ ಕೆರೆಗಳಿಂದ ಅಲಂಕೃತಗೊಂಡ ನಗರಗಳಲ್ಲಿ ಈಗ ಕೆರೆಗಳು ಮಾಯವಾಗಿ ಕಟ್ಟಡಗಳು ನಿರ್ಮಾಣವಾಗಿವೆ. ಕೆರೆಗಳಿಂದ ನೀರಿನ ಸ್ವಾವಲಂಬನೆ ಸಾಧಿಸಿದ್ದ ನಗರಗಳು ನದಿಮೂಲವನ್ನು ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಕೈಗಾರಿಕೆಗಳು, ಪರಿಸರ ಮಾಲಿನ್ಯ ಮುಂತಾದ ಕಾರಣಗಳಿಂದ ನೀರಿನ ಮೂಲಗಳು ಕಲುಷಿತಗೊಳ್ಳುತ್ತಿವೆ. ವಿಪರೀತವಾದ ಅಂತರ್ಜಲದ ಬಳಕೆಯಿಂದಲೂ ಶುದ್ಧ ನೀರು ಮರೀಚಿಕೆಯಾಗುತ್ತಿದೆ ಎಂದು ಹೇಳಿದರು.

ನೀರಿನ ಅಗತ್ಯ ಹಾಗೂ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ. ನೀರಿನ ಸಂರಕ್ಷಣೆ ಕುರಿತು ಸಂಘಸಂಸ್ಥೆಗಳು, ಯುವ ಜನರಿಂದ ಜಾಗೃತಿಯ ಕೆಲಸಗಳು ಆಗಬೇಕಿವೆ. ಪ್ರಮುಖವಾಗಿ ನೈಸರ್ಗಿಕ ನೀರಿನ ಮೂಲಗಳಿಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಜೇಸಿ ವಿಶ್ವ ಜಲದಿನದ ಕಾರ್ಯಕ್ರಮವನ್ನು ವಿಶೇಷ ಕಾರ್ಯದ ಮೂಲಕ ಆಚರಿಸಿ ನೀರಿನ ಮಹತ್ವ ಸಾರುತ್ತಿದೆ ಎಂದರು.

ಮಲೆನಾಡು ಒಳ್ಳೆಯ ಮನಸ್ಸು ಒಕ್ಕೂಟದ ಸಂಯೋಜಕ ಚೈತನ್ಯ ವೆಂಕಿ ಮಾತನಾಡಿ, ಪ್ರಕೃತಿ, ದೇವದತ್ತವಾಗಿ ದೊರೆತಿರುವ ನೀರನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೂ ಉತ್ತಮ ನೀರು ಕೊಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ. ಶುದ್ಧ ಹಾಗೂ ಹೆಚ್ಚಿನ ಪ್ರಮಾಣದ ನೀರು ಇದ್ದರೆ ಮಾತ್ರ ಆರೋಗ್ಯ, ಪ್ರಕೃತಿ, ಜೀವಸಂಕುಲ ಉಳಿಯಲು ಸಾಧ್ಯ ಎಂಬುದನ್ನು ನಾವೆಲ್ಲರೂ ಅರಿಯಬೇಕಿದೆ ಎಂದು ತಿಳಿಸಿದರು.

ನೀರಿನ ಸಂರಕ್ಷಣೆಗೆ ವೈಜ್ಞಾನಿಕ ಕ್ರಮಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಪ್ರಮುಖವಾಗಿ ಮಳೆ ನೀರು ಸಂಗ್ರಹವನ್ನು ಪ್ರತಿ ಮನೆಯಲ್ಲೂ ಮಾಡಬೇಕಿದೆ. ಕೃಷಿಯಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು. ಹಳ್ಳ, ಕೊಳ್ಳಗಳಿಗೆ ಚೆಕ್ ಡ್ಯಾಂ ನಿರ್ಮಿಸಬೇಕಿದೆ. ಕೈಗಾರಿಕೆಗಳು ನೀರಿನ ಮರುಬಳಕೆ ಮಾಡಿಕೊಳ್ಳುವ ಕ್ರಮ ಅನುಸರಿಸಬೇಕು. ಮಳೆ ನೀರು ಪೋಲಾಗದಂತೆ ಸಂಗ್ರಹಿಸಬೇಕು. ಹೀಗಾದಾಗ ಮಾತ್ರ ನೀರಿನ ಸಂರಕ್ಷಣೆ ಸಾಧ್ಯ. ಇಲ್ಲದಿದ್ದರೆ ಮುಂದೊಂದು ದಿನ ನೀರಿಗಾಗಿ ಯುದ್ಧ ನಡೆದರೂ ಅಚ್ಚರಿ ಇಲ್ಲ ಎಂದರು.

ಅರ್ಚಕ ನಾಗರಾಜ ಭಟ್ ನೇತೃತ್ವದಲ್ಲಿ ಭದ್ರಾ ನದಿಗೆ ಗಂಗಾಪೂಜೆ ನೆರವೇರಿಸಿ ಪಂಚಾಮೃತಾಭಿಷೇಕ, ಪುಷ್ಪಾರ್ಚನೆ, ಬಾಗಿನ ಅರ್ಪಣೆ, ಮಹಾ ಆರತಿ ನೆರವೇರಿಸಲಾಯಿತು. ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ, ಪಿಡಿಒ ಎಚ್.ಎಂ.ಕಾಶಪ್ಪ, ಹಿರಿಯ ಕ್ರೀಡಾಪಟು ಒ.ಡಿ.ಸ್ಟೀಫನ್, ಜೇಸಿ ಕಾರ್ಯದರ್ಶಿ ವಿ.ಅಶೋಕ, ಪ್ರಮುಖರಾದ ಸುಧಾಕರ್, ಬಿ.ಎಚ್.ಮನುಕುಮಾರ್, ಕೆ.ಎಂ.ರಾಘವೇಂದ್ರ, ಚೇತನ್‌ಕುಮಾರ್, ಸನತ್ ಶೆಟ್ಟಿ, ಸೋಮೇಶ್ ಗೌಡ, ಎಚ್.ಎನ್.ವಿಶ್ವನಾಥ್, ಪೂಜಾ ಅಶೋಕ್, ಅನ್ವಯ್, ಅವನಿ ತೇಜಸ್ವಿನಿ, ಸತೀಶ್ ಕಾಮತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net