ಅಂತರ್ಜಲ ಪುನಶ್ಚೇತನಕ್ಕೆ ಒತ್ತು ನೀಡಿ:ಜಿಪಂ ಸಿಇಒ ಬಿ.ಆರ್.ಪೂರ್ಣಿಮಾ ಕರೆ

ಅಂತರ್ಜಲ ಪುನಶ್ಚೇತನಕ್ಕೆ ಒತ್ತು ನೀಡಿ:ಜಿಪಂ ಸಿಇಒ ಬಿ.ಆರ್.ಪೂರ್ಣಿಮಾ ಕರೆ
Published on

ಹಾಸನ: ಸಾರ್ವಜನಿಕರು ತಮ್ಮ ಕೊಳವೆ ಬಾವಿಗಳ ಉಪಯುಕ್ತತೆಯನ್ನು ವೃದ್ಧಿಗೊಳಿಸಲು ಅಂತರ್ಜಲ ಪುನಶ್ಚೇತನಕ್ಕಾಗಿ ನೀರಿನ ಮರುಪೂರಣಕ್ಕೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಬಿ.ಆರ್.ಪೂರ್ಣಿಮಾ ಅವರು ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ನಗರದ ಹಾಸನಾಂಬ ಕಲಾ ಮಂದಿರದಲ್ಲಿ ಸೋಮವಾರ ಜಿಲ್ಲೆಯ ರೈತರಿಗೆ ಮಾಹಿತಿ ನೀಡಲು ಆಯೋಜಿಸಿದ್ದ ಮಳೆ ನೀರು ಕೊಯ್ಲು ಹಾಗೂ ಅಂತರ್ಜಲ ಪುನಶ್ಚೇತನ ಮತ್ತು ನೀರಿನ ಸಮರ್ಪಕ ಬಳಕೆ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ನೀರಿನ ಮಹತ್ವ ತಿಳಿದಿರಬೇಕು ಹಾಗೂ ನೀರನ್ನು ಮಿತವಾಗಿ ಬಳಸಬೇಕು ಎಂಬುದರ ಬಗ್ಗೆ ಅರಿವಿರಬೇಕು. 2 ವರ್ಷದ ಮಗುವಿನಿಂದ ವೃದ್ಧರವರೆಗೂ ನೀರನ್ನು ಅನಾವಶ್ಯಕವಾಗಿ ಪೋಲು ಮಾಡದಂತೆ ತಿಳಿವಳಿಕೆ ಮೂಡಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಎರಡು ಸಾವಿರ ಕಾಮಗಾರಿಗಳನ್ನು ಮಾಡಲಾಗಿದ್ದು, ಕೆಲವು ಕಡೆ ಅಳವಡಿಸಿರುವ ಟ್ಯಾಪ್ ಹಾಗೂ ಮೀಟರ್ ತೆಗೆದಿದ್ದಾರೆ. ಇವುಗಳನ್ನು ಎಚ್ಚರಿಕೆಯಿಂದ ನಿರ್ವಹಣೆ ಮಾಡಬೇಕು. ಇಲ್ಲವಾದಲ್ಲಿ ಮುಂದೆ ಕುಡಿಯುವ ನೀರಿಗೆ ತೊಂದರೆಯಾಗುತ್ತದೆ ಎಂದರು.
ಮಳೆ ನೀರು ಕೊಯ್ಲು ಹಾಗೂ ಅಂತರ್ಜಲ ತಜ್ಞರಾದ ಚಿತ್ರದುರ್ಗದ ಡಾ. ದೇವರಾಜರೆಡ್ಡಿ ಅವರು ಮಾತನಾಡಿ, ಪ್ರತಿಯೊಬ್ಬರೂ ಜಲ ಸಾಕ್ಷರರಾಗಬೇಕು. ಓಡುವ ನೀರನ್ನು, ನಡೆಯುವಂತೆ, ನಡೆಯುವುದನ್ನು ನಿಲ್ಲುವಂತೆ ಮಾಡುವ ಮೂಲಕ ನೀರನ್ನು ಭೂಮಿಗೆ ಹಿಂಗುವಂತೆ ಮಾಡಿ ಅಂತರ್ಜಲ ಸಂರಕ್ಷಣೆ ಮಾಡಬೇಕು ಎಂದು ತಿಳಿಸಿದರು.
ತಮ್ಮ ತಮ್ಮ ಮನೆಗಳಲ್ಲಿ, ವಾಣಿಜ್ಯ ಕಟ್ಟಡಗಳಲ್ಲಿ ಹಾಗೂ ಸರ್ಕಾರಿ ಕಚೇರಿ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಸಿಕೊಂಡು ಮಳೆ ನೀರನ್ನು ಸದ್ಬಳಕೆೆ ಮಾಡುವ ಮೂಲಕ ಜಲ ಕ್ಷಾಮ ತಲೆದೂರದಂತೆ ಅತ್ಯಂತ ಜಾಗರೂಕತೆಯಿಂದ ನೀರನ್ನು ಸಂರಕ್ಷಿಸಬೇಕು. ಅಕಾಲಿಕ ಮಳೆಗಳು ಬಂದಾಗ ಅದನ್ನು ಹಿಡಿದಿಡಲು ಕ್ರಮ ವಹಿಸಿ ಸರಳವಾಗಿ ಮಳೆ ಕೊಯ್ಲು ಅಳವಡಿಸಿಕೊಂಡರೆ ಸಹಕಾರಿಯಾಗಲಿದೆ ಎಂದರು.
ಕೃಷಿಕರು ಕೊಳವೆ ಬಾವಿಗಳನ್ನು ರಿ-ಚಾರ್ಜ್ ಮಾಡಲು ಗಮನಹರಿಸಬೇಕು. ಕೊಳವೆ ಬಾವಿಗಳನ್ನು ಕೊರೆದಾಗ ನೀರು ಲಭ್ಯವಾಗಲ್ಲಿಲ್ಲ ಎಂದು ಕೇಸಿಂಗ್ ಪೈಪ್ ತೆಗೆದು ಅದನ್ನು ಮುಚ್ಚುವ ಬದಲಾಗಿ ಅದಕ್ಕೆ ಕ್ಯಾಪ್ ಹಾಕಿ ಹಾಗೇ ಬಿಟ್ಟರೆ ಮುಂದಿನ ದಿನಗಳಲ್ಲಿ ನೀರು ಬರುವ ಸಾಧ್ಯತೆಗಳಿರುತ್ತದೆ. ಹೊಸ ಕೊಳವೆ ಬಾವಿಗಳನ್ನು ಕೊರೆಯುವ ಬದಲು ಇರುವ ಬಾವಿಗಳನ್ನು ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಿ ಪುನಶ್ಚೇತನಗೊಳಿಸಬೇಕು. ಈಗಾಗಲೇ ನಾವು ಮೀತಿಮೀರಿ ಅಂತರ್ಜಲ ತೆಗೆದಿದ್ದೇವೆ. ನೀರನ್ನು ಪೂಜ್ಯ ಭಾವನೆಯಿಂದ ನೋಡುತ್ತಿದ್ದ ನಾವು ಭೂಮಿಯನ್ನು ಕೊರೆದು ತೊಂದರೆ ನೀಡುತ್ತಿದ್ದೇವೆ. ದೇಶದಲ್ಲಿ 4 ಕೋಟಿ ಬೊರ್‌ವೆಲ್‌ಗಳನ್ನು ಕೊರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಹಸಿರು ಭೂಮಿ ಪ್ರತಿಷ್ಠಾನದ ಆರ್.ಪಿ.ವೆಂಕಟೇಶ್ ಮೂರ್ತಿ, ಕೃಷಿ ಕಾಲೇಜಿನ ಡೀನ್ ವಾಸುದೇವನ್, ಕೃಷಿಕ ಸಮಾಜದ ಅಧ್ಯಕ್ಷರಾದ ಕೃಷ್ಣೇಗೌಡ, ರಾಜ್ಯ ಪ್ರತಿನಿಧಿ ದೊಡ್ಡವೀರೇಗೌಡ, ಜಂಟಿ ಕೃಷಿ ನಿರ್ದೇಶಕರಾದ ರಾಜಸುಲೋಚನಾ, ರಾಜ್ಯ ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ಈ. ಕೃಷ್ಣೇಗೌಡ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಮಂಗಳಾ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net