ಅಂತರ್ಜಲ ಚೇತನ ಯೋಜನೆಗೆ 19ಕ್ಕೆ ಚಾಲನೆ

14CBP2
Published on

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅಂತರ್ಜಲ ಚೇತನ ಯೋಜನೆಗೆ ಜಿಲ್ಲೆಯಲ್ಲಿ ಮೇ 19 ರಂದು ಚಾಲನೆ ದೊರೆಯಲಿದೆ ಎಂದು ಜಿಪಂ ಸಿಇಒ ಬಿ.ಫೌಜೀಯಾ ತರನ್ನುಮ್ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಗುರುವಾರ ಪೂರ್ವಭಾವಿ ಸಭೆ ನಡೆಸಿದ ಅವರು, ಮೇ 19ರಂದು ಚಿಕ್ಕಬಳ್ಳಾಪುರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಭೇಟಿ ನೀಡಲಿದ್ದು ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಮಳೆ ಅಭಾವ, ನೀರಿನ ಹಾಹಾಕಾರ, ಕೊಳವೆಬಾವಿಗಳ ವೈಫಲ್ಯ ಸೇರಿ ನಾನಾ ಸಮಸ್ಯೆಗಳನ್ನು ಎದುರಿಸುತ್ತಿರುವ ಬರಪೀಡಿತ ಪ್ರದೇಶಗಳಲ್ಲಿ ಅಂತರ್ಜಲಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಪೂರಕವಾದ ಕೆಲಸಗಳನ್ನು ಕೈಗೊಳ್ಳುವುದೇ ಅಂತರ್ಜಲ ಚೇತನ ಯೋಜನೆಯಾಗಿದೆ, ಈ ಯೋಜನೆಯಡಿ ಜಿಲ್ಲಾದ್ಯಂತ 1 ಸಾವಿರ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಎನ್.ನೋಮೇಶ್ ಕುಮಾರ್, ಮುಖ್ಯ ಯೋಜನಾಧಿಕಾರಿ ಎನ್.ಮಾಧುರಾಮ್, ಯೋಜನಾ ನಿರ್ದೇಶಕ ಕೆ.ಗಿರಿಜಾ ಶಂಕರ್, ತಾಪಂ ಇಒ ಎಸ್.ಎಲ್.ಹರ್ಷವರ್ಧನ್ ಇತರರಿದ್ದರು.

ಸಿದ್ಧತೆಗೆ ಸೂಚಿಸಿದ್ದ ಸಚಿವ: ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ನೂತನ ಯೋಜನೆಯ ಅನುಷ್ಠಾನಕ್ಕೆ ಸೂಕ್ತ ಸಿದ್ಧತೆಗಳನ್ನು ಕೈಗೊಳ್ಳಲು ಜಿಪಂಗೆ ಸೂಚಿಸಿದ್ದರು. ಅದರಂತೆ ಯೋಜನೆ ಅನುಷ್ಠಾನಕ್ಕೆ ಜಿಪಂ ಈಗಾಗಲೇ ಸಿದ್ಧತೆ ನಡೆಸಿದೆ.

ಸಿಇಒ ನೇತೃತ್ವದಲ್ಲಿ ಸಭೆ: ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಸಿಇಒ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಜಿಲ್ಲೆಯಲ್ಲಿ ಕಲ್ಯಾಣಿ, ಗೋಕುಂಟೆ, ಕೆರೆ, ನದಿಗಳ ಸಂರಕ್ಷಣೆ ಮತ್ತು ಪುನಶ್ಚೇತನಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಿದರು. ಉದ್ಯೋಗ ಖಾತರಿ ಯೋಜನೆ ಮತ್ತು ಅಂತರ್ಜಲ ಚೇತನ ಯೋಜನೆಯಡಿ ಕೆರೆ, ಬದು ನಿರ್ಮಾಣ, ಗೋಕುಂಟೆ ಹಾಗೂ ಪೋಷಕ ಕಾಲುವೆಗಳ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net