ಅಂತರ್ಜಲ ಕುಸಿತ, ರೈತ ತತ್ತರ!

Gorund water
Published on

ಮಂಜುನಾಥ ಕೋಳಿಗುಡ್ಡ ಬೆಳಗಾವಿ:ಕುಡಿಯುವ ನೀರಿನ ಸಮಸ್ಯೆ ತೀವ್ರತೆ ಪಡೆಯುತ್ತಿರುವ ಬೆನ್ನಲ್ಲೆ ಜಿಲ್ಲೆಯಲ್ಲಿ ಕೊಳವೆ ಮತ್ತು ತೆರೆದ ಬಾವಿಗಳ ಅಂತರ್ಜಲ ಮಟ್ಟ ಕುಸಿಯುತ್ತಿರುವುದು ರೈತರು, ಸಾರ್ವಜನಿಕರನ್ನು ಮತ್ತಷ್ಟು ಆತಂಕಕ್ಕೆ ತಳ್ಳಿದೆ. 650ರಿಂದ 800 ಅಡಿಗಳಷ್ಟು ಭೂಮಿಯನ್ನಕೊರೆದರೂ ನೀರು ಸಿಗುತ್ತಿಲ್ಲ. ಸಿಗುವ ನೀರೂ ಸಾಲುತ್ತಿಲ್ಲ.
ಕಳೆದ ವರ್ಷದ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವ ಹಿನ್ನೆಲೆಯಲ್ಲಿ ಕೆರೆ, ಕಟ್ಟೆಗಳು, ಹಳ್ಳಕೊಳ್ಳಗಳಲ್ಲಿ ನೀರು ಕಡಿಮೆ ಪ್ರಮಾಣದಲ್ಲಿ ಸಂಗ್ರಹವಾಗಿದೆ. ಅಲ್ಲದೆ, ನದಿಗಳಲ್ಲಿ ನಿರಂತರವಾಗಿ ನೀರು ಹರಿಯುತ್ತಿಲ್ಲ. ಈ ವರ್ಷ ಮುಂಗಾರು ಮಳೆ ಕೂಡ ವಿಳಂಬವಾಗಿರುವ ಹಿನ್ನೆಲೆ ಕೊಳವೆ ಬಾವಿಗಳ ಅಂತರ್ಜಲ ಮಟ್ಟ 650ರಿಂದ 800ಕ್ಕೆ ಕುಸಿದಿದೆ. ಮತ್ತೊಂದೆಡೆ ಸುಮಾರು ನೂರು ಅಡಿಗಳಷ್ಟು ಆಳದ ತೆರೆದ ಬಾವಿಗಳ ಅಂತರ್ಜಲ ಕುಸಿತದಿಂದ ನೀರಿಲ್ಲದೆ ಬತ್ತುತ್ತಿವೆ.
ಮೂಡಲಗಿ, ಸವದತ್ತಿ, ರಾಮದುರ್ಗ, ಬೈಲಹೊಂಗಲ, ಕಿತ್ತೂರು, ಚಿಕ್ಕೋಡಿ, ಖಾನಾಪುರ ಹಾಗೂ ಬೆಳಗಾವಿ ತಾಲೂಕುಗಳಲ್ಲಿ ಶೇ. 80 ಜನರು ಕುಡಿಯುವ ನೀರಿಗಾಗಿ, ರೈತರು ಕೃಷಿ ಚಟುವಟಿಕೆಗಳಿಗಾಗಿ ಕೊಳವೆ ಬಾವಿಗಳನ್ನು ಅವಲಂಬಿಸಿದ್ದಾರೆ. ಕೆಲ ಹಳ್ಳಿಗಳಲ್ಲಿನ ಜನರು ಕುಡಿಯುವ ನೀರಿಗಾಗಿ ನದಿ ನೀರನ್ನು ಅವಲಂಬಿಸಿದ್ದಾರೆ. ಆದರೆ, ಜಲಾಶಯಗಳಲ್ಲಿ ನೀರಿನ ಮಟ್ಟದ ಕಡಿಮೆ ಇರುವುದರಿಂದ ನದಿಗಳಿಗೆ ಹರಿಸುತ್ತಿಲ್ಲ. ಮತ್ತೊಂದೆಡೆ ಕೊಳವೆ, ತೆರೆದ ಬಾವಿಗಳು ನೀರಿಲ್ಲದೆ ಬತ್ತುತ್ತಿವೆ.
ಈಗಾಗಲೇ 18 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಾರಕ್ಕೊಮ್ಮ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಕೆಲವು ಕಡೆ ಎರಡು ದಿನಕ್ಕೊಮ್ಮೆ ಕುಡಿಯವ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟದ ಕಡಿಮೆಯಾಗಿರುವುದರಿಂದ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಿಗುತ್ತಿಲ್ಲ. ನೆಲದಾಳಕ್ಕೆ ಹೋದಂತೆ ನೀರಿನ ಗುಣಮಟ್ಟ ಕೂಡ ವಿಷಮಿಸುತ್ತಿದೆ. ಕೆರೆ, ಹಳ್ಳಕೊಳ್ಳಗಳಲ್ಲಿ ಜಾನುವಾರು, ಕುರಿಗಳಿಗೆ ನೀರು ಸಮರ್ಪಕವಾಗಿ ಸಿಗುತ್ತಿಲ್ಲ. ಇದರಿಂದಾಗಿ ರೈತರು, ಕುರಿಗಾಹಿಗಳು, ಸಾರ್ವಜನಿಕರು ನೀರಿಗಾಗಿ ಪರದಾಡು ಪರಿಸ್ಥಿತಿ ಉದ್ಭವಿಸಿದೆ.
ಸದ್ಯ ಕೊಳವೆ ಬಾವಿಗಳ ನೀರಿನ ಮೂಲಗಳ ಆಧಾರದ ಮೇಲೆ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ 1200 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಆದರೆ, ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಕುಸಿತದಿಂದಾಗಿ ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗದಲ್ಲಿ ಸುಮಾರು 430ಕ್ಕೂ ಘಟಕಗಳಿಗೆ ನೀರು ಸಾಕಾಗುತ್ತಿಲ್ಲ. ಕೆಲ ಘಟಕಗಳು ಸಂಪೂರ್ಣ ಬಂದ್ ಆಗಿವೆ. ಟ್ಯಾಂಕರ್ ನೀರಿಗೂ ಸಮಸ್ಯೆ ಎದುರಿಸಬೇಕಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಬೆಳಗಾವಿ, ಚಿಕ್ಕೋಡಿ ವ್ಯಾಪ್ತಿಯ ಕೆಲ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಖಾನಾಪುರ, ಸವದತ್ತಿ ತಾಲೂಕಿನ ಕೆಲವು ಕಡೆ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ. ಅಂತರ್ಜಲ ಮಟ್ಟ ಕುಸಿತದಿಂದ ಕೊಳವೆ ಬಾವಿಗಳು ಬಂದ್ ಆಗುತ್ತಿವೆ.ಶಶಿಕಾಂತ ನಾಯಕ, ಅಭಿಯಂತ, ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗ ಬೆಳಗಾವಿ

ಅಂತರ್ಜಲಮಟ್ಟ ವೃದ್ಧಿಸುವ, ಮಳೆ ನೀರು ಸಂಗ್ರಹಿಸುವ ಉದ್ದೇಶದಿಂದಲೇ ನರೇಗಾ ಯೋಜನೆ ಅಡಿಯಲ್ಲಿ ಕೆರೆಗಳ ಅಭಿವೃದ್ಧಿ, ಕೃಷಿ ಹೊಂಡಗಳ ನಿರ್ಮಾಣ, ಕೊಳವೆ ಬಾವಿಗಳ ರಿಚಾರ್ಜ್ ಕೆಲಸ ಮಾಡಲಾಗುತ್ತಿದೆ.ಹರ್ಷಲ್ ಭೋಯರ್, ಜಿಪಂ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net