

ಚಳ್ಳಕೆರೆ: ಬಯಲು ಸೀಮೆಯಲ್ಲಿ ರೈತರ ಬಲವರ್ಧನೆಗೆ ವೇದಾವತಿ ನದಿ ಭಾಗದಲ್ಲಿ ಚೆಕ್‌ಡ್ಯಾಂಗಳ ನಿರ್ಮಾಣ ಕಾರ್ಯದಿಂದ ಅಂತರ್ಜಲ ಅಭಿವೃದ್ಧಿಗೆ ಅನುಕೂಲ ಮಾಡಲಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಕೃಷಿ ಇಲಾಖೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈಗಾಗಲೇ ವೇದಾವತಿ ನದಿಗೆ ಐದು ಭಾಗದಲ್ಲಿ ಚೆಕ್‌ಡ್ಯಾಂ ನಿರ್ಮಿಸಲಾಗಿದೆ. ಸರ್ಕಾರದ ಹಂತದಲ್ಲಿ ಅನುಮತಿ ಪಡೆದು ವಾಣಿ ವಿಲಾಸ ಸಾಗರದಿಂದ 0.25 ಟಿಎಂಸಿ ನೀರು ಹರಿಸಲು ಅವಕಾಶ ಮಾಡಿಕೊಳ್ಳಲಾಗಿದೆ ಎಂದರು.
ಇದರಿಂದ ನದಿ ಭಾಗದ ಸಾವಿರಾರು ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ. ಅಗತ್ಯ ಇರುವ ವೇದಾವತಿ ನದಿ ಪಾತ್ರದ ಗೋಸಿಕೆರೆ ಮತ್ತು ತೊರೆಬೀರನಹಳ್ಳಿ ಸಮೀಪದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅತಿ ಶೀಘ್ರವಾಗಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.
ಮಳೆ ವ್ಯತ್ಯಯದಿಂದ ಬೆಳೆ ನಷ್ಟ ಪರಿಹಾರಕ್ಕೆ ಪ್ರತಿ ವರ್ಷ ಕೇಂದ್ರ ಸರ್ಕಾರಕ್ಕೆ ವರದಿ ಮಾಡಲಾಗುತ್ತಿದೆ. ಅನುದಾನ ಬಿಡುಗಡೆ ಆಗುತ್ತಿಲ್ಲ. 14 ಮತ್ತು 15ನೇ ಹಣಕಾಸಿನ ಅನುದಾನ ರಾಜ್ಯಕ್ಕೆ ಸಮರ್ಪಕವಾಗಿ ಸಿಗುತ್ತಿಲ್ಲ. ಪ್ರತಿ ವಸ್ತುವಿನ ಖರೀದಿಯಲ್ಲಿ 1ರೂ ಜಿಎಸ್‌ಟಿ ಪಡೆಯುವ ಕೇಂದ್ರ ಸರ್ಕಾರ, ರಾಜ್ಯಕ್ಕೆ 13 ಪೈಸೆ ಮಾತ್ರ ನೀಡಲಾಗುತ್ತಿದೆ ಎಂದರು.
ರಾಜ್ಯಕ್ಕೆ ಬರಬೇಕಾಗಿದ್ದ 460 ಸಾವಿರ ಕೋಟಿ ರೂ. ಜಿಎಸ್‌ಟಿ ಹಣದಲ್ಲಿ ಕೇವಲ 52 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದರಿಂದ ಬಹುವರ್ಷಗಳ ರೈತರ ಸಮಸ್ಯೆ ಮತ್ತು ನಿರೀಕ್ಷಿತ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆಯಾಗಿದೆ. ರಾಜ್ಯ, ಕೇಂದ್ರ ಸರ್ಕಾರಗಳ ಹಂತದಲ್ಲಿ ರೈತರ ಸಮಸ್ಯೆ ಈಡೇರಿಕೆಗೆ ವಿವಿಧ ರೈತ ಸಂಘಟನೆಗಳು ಒಗ್ಗೂಡುವ ಇಚ್ಛಾಶಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಕಳೆದ ವರ್ಷ ರೈತರಿಗೆ ಸಮರ್ಪಕವಾಗಿ ಬೆಳೆವಿಮೆ ಮತ್ತು ಬೆಳೆ ಪರಿಹಾರ ವಿತರಣೆ ಆಗಿಲ್ಲ. ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ರೈತ ವಿರೋಧಿಯಾಗಿದೆ. ಕೃಷಿ ಇಲಾಖೆಯಿಂದಲೂ ತೊಗರಿ ಸೇರಿದಂತೆ ಕಳಪೆ ಬಿತ್ತನೆ ಬೀಜ ವಿತರಿಸಲಾಗಿದೆ. 2951 ತೊಗರಿ ಬೆಳೆ ರೈತರಿಗೆ ಪರಿಹಾರ ಸಿಕ್ಕಿಲ್ಲ ಎಂದು ಹೇಳಿದರು.
ಬೆಳೆ ಕಟಾವಿನಲ್ಲಿ ರೈತರ ನಿರ್ಲಕ್ಷ್ಯದಿಂದ ರೈತರಿಗೆ ವಂಚನೆ ಆಗುತ್ತಿದೆ. ರಾಗಿ ಮತ್ತು ಜೋಳ ಬೆಳೆಗಳನ್ನು ಸಿರಿಧಾನ್ಯ ವಲಯಕ್ಕೆ ಪರಿಗಣಿಸಿ ಪ್ರೋತ್ಸಾಹ ಧನ ನೀಡಬೇಕು. ಬಹುವರ್ಷದಿಂದ ನೆನೆಗುದಿಗೆ ಬಿದ್ದಿರುವ ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸಬೇಕು. ತಾಲೂಕಿನ ಪ್ರತಿ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಆಗಬೇಕು ಎಂದು ರೈತ ಮುಖಂಡರಾದ ಸೋಮಗುದ್ದು ರಂಗಸ್ವಾಮಿ, ಕೆ.ಪಿ.ಭೂತಯ್ಯ, ರೆಡ್ಡಿಹಳ್ಳಿ ವೀರಣ್ಣ, ಕೆ.ಚಿಕ್ಕಣ್ಣ ಇತರರು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಭದ್ರಾ ಮೇಲ್ದಂಡೆ ಕಾಮಗಾರಿಗೆ 5300 ಕೋಟಿ ರೂ. ಬಿಡುಗಡೆ ಮಾಡದೆ ನಿರ್ಲಕ್ಷ್ಯ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ರೈತ ಸಂಘಟನೆಗಳು ಪ್ರಶ್ನೆ ಮಾಡಬೇಕು. ರಾಜ್ಯದಿಂದ ಪಡೆಯುತ್ತಿರುವ ಜಿಎಸ್‌ಟಿ ಪಾಲು ನ್ಯಾಯಬದ್ಧವಾಗಿ ರಾಜ್ಯಕ್ಕೆ ನೀಡುವಂತೆ ಆಗ್ರಹಿಸಬೇಕು ಎಂದರು.
15ನೇ ಹಣಕಾಸು ಅನುದಾನ ಸಕಾಲಕ್ಕೆ ಬಿಡುಗಡೆ ಮಾಡಲು ಕೇಂದ್ರಕ್ಕೆ ಒತ್ತಡ ಹೇರಬೇಕು ಎಂದ ಅವರು, ರಾಜ್ಯದ ಗ್ಯಾರಂಟಿ ಯೋಜನೆಗಳಿಂದ ಬಡ ಕುಟುಂಬಗಳಿಗೆ ಅನುಕೂಲವಾಗಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಿಗೂ ಬೊಕ್ಕಸ ಖಾಲಿ ಆಗಿಲ್ಲ ಎಂದು ಹೇಳಿಕೊಂಡರು.
ಕಾರ್ಯಕ್ರಮದಲ್ಲಿ ಜಿಪಂ ಕೆಡಿಪಿ ಸದಸ್ಯ ತಬಲ ರಂಗಸ್ವಾಮಿ, ತಾಪಂ ಕೆಡಿಪಿ ಸದಸ್ಯ ಚೌಳೂರು ಬಸವರಾಜ್, ಎಂ.ರಮೇಶ್, ರೈತ ಮುಖಂಡರಾದ ಸೋಮಗುದ್ದು ರಂಗಸ್ವಾಮಿ, ಕೆ.ಪಿ.ಭೂತಯ್ಯ, ರೆಡ್ಡಿಹಳ್ಳಿ ವೀರಣ್ಣ, ಕೆ.ಚಿಕ್ಕಣ್ಣ, ಮೈರಾಡ ಪಾಲಯ್ಯ, ತಿಪ್ಪೇಸ್ವಾಮಿ, ಎ.ನಾಗರಾಜ, ಡಾ.ಸಿ.ಶಿವಲಿಂಗಪ್ಪ, ಎಂ.ಶಿವಲಿಂಗಪ್ಪ, ಡಾ.ಬಿ.ಎನ್.ಪ್ರಭಾಕರ್, ಡಾ.ಜೆ.ಅಶೋಕ್, ಜೀವನ್, ರಾಮಕೃಷ್ಣ ಇತರರಿದ್ದರು.