

ಹಾಸನ: ಹೇಮಗಂಗೋತ್ರಿ ವಿಶ್ವವಿದ್ಯಾನಿಲಯದ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ಅಂತರ್ ಕಾಲೇಜು ಗುಡ್ಡಗಾಡು ಓಟ ಸ್ಪರ್ಧೆಗೆ ಹಾಸನ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಟಿ.ಸಿ ತಾರಾನಾಥ್ ಚಾಲನೆ ನೀಡಿದರು.
ನಂರ ಮಾತನಾಡಿದ ಕುಲಪತಿ ಪ್ರೊ. ಟಿ.ಸಿ ತಾರಾನಾಥ್ ಮಾತನಾಡಿ, ಹೇಮ ಗಂಗೋತ್ರಿ ಎರಡನೇ ವರ್ಷ ಕಾರ್ಯಾರಂಭ ಮಾಡಿದ ಅವಧಿಯಲ್ಲಿ ವಿಧ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವದ ವಿಕಾಸನಕ್ಕಾಗಿ ಅವರನ್ನು ಶಾರೀರಿಕವಾಗಿ ಸಧೃಡ ಗೋಳಿಸಲು ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ವಿಜೇತರಾದ 6 ಜನ ವಿದ್ಯಾರ್ಥಿಗಳನ್ನು ಅಂತರ್ ವಿಶ್ವ ವಿದ್ಯಾನಿಲಯ ಮಟ್ಟದ ಸ್ಪರ್ಧೆಗೆ ಕಳುಹಿಸಿ ಕೊಡಲಾಗುವುದು ಎಂದರು.
ದೈಹಿಕ ಶಿಕ್ಷಣ ನಿರ್ದೇಶಕ ಡಾ. ಹಾಲಪ್ಪ ಗಾಜೇರ ಅವರು ಮಾತನಾಡಿ, ವಿಶ್ವ ವಿದ್ಯಾನಿಲಯದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಬೇಕು ಎಂದು ಮನವಿ ಮಾಡಿದಾಗ ಕುಲ ಸಚಿವರಾದ ಜಗದೀಶ್ ಹಾಗೂ ಕುಲಪತಿಗಳಾದ ಪ್ರೊ. ಟಿ.ಸಿ ತಾರಾನಾಥ್ ಅವರು ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ಜೊತೆಗೆ ಕ್ರೀಡಾ ಚಟುವಟಿಕೆಗೆ ಅಗತ್ಯ ಇರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಟ್ಟಿದ್ದಾರೆ ಎಂದು ಹೇಳಿದರು.
ಈ ಹಿಂದೆ ಕೂಡ ಅಂತರ್ ಕಾಲೇಜು ಕಬ್ಬಡಿ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಗೆದ್ದ ತಂಡ ಚೆನ್ನೈ ನಲ್ಲಿ ನಡೆದ ಅಂತರ್ ರಾಷ್ಟ್ರೀಯ ಮಟ್ಟದ ಕ್ರೀಡಾಯಲ್ಲಿ ಭಾಗಿಯಾಗಿದ್ದರು. ಅದೇ ರೀತಿ ಗುಡ್ಡಗಾಡು ಓಟದಲ್ಲಿ ಕೂಡ ಗೆಲುವು ಸಾಧಿಸಿದ ವಿದ್ಯಾರ್ಥಿಗಳನ್ನು ಡಿ.11 ರಂದು ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ನಡೆಯಲಿರುವ ಅಂತರ್ ವಿಶ್ವ ವಿದ್ಯಾನಿಲಯದ ಕ್ರೀಡಾಕೂಟಕ್ಕೆ ಕಳುಹಿಸುವ ಗುರಿ ಹೊಂದಿದ್ದೇವೆ ಎಂದರು.
ನಗರದ ಹೊರವಲಯದಲ್ಲಿರುವ ಹೇಮಗಂಗೋತ್ರಿ ವಿಶ್ವವಿದ್ಯಾನಿಲಯದ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ 53 ಕಾಲೇಜುಗಳಿಂದ 45 ಜನ ಯುವಕರು, 25 ಜನ ಯುವಂತಿಯರು ಸೇರಿ ಒಟ್ಟು 70 ವಿದ್ಯಾರ್ಥಿಗಳು 10 ಕಿ. ಮೀ ಗುಡ್ಡಗಾಡು ಓಟದಲ್ಲಿ ಭಾಗವಹಿಸಿ ಗಮನ ಸೆಳೆದರು. ಸ್ಪರ್ಧಾಳುಗಳಿಗೆ ಯಾವುದೇ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಯಿತು.
ಈ ವೇಳೆ ಕ್ರೀಡಾಕೂಟದ ಸಂಘಟನಾ ಕಾರ್ಯದರ್ಶಿ ಚಂದ್ರ ನಾಯಕ್, ದೈಹಿಕ ಶಿಕ್ಷಣ ವಿಭಾಗದ ಸಂಯೋಜಕ ಪವನ್, ಆಯ್ಕೆ ಸಮಿತಿ ಸದಸ್ಯ ಜೆ.ಭಾಸ್ಕರ್ , ಯೋಗೇಶ್, ಹಾಗೂ ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ವಿಭಾಗದ ಶಿಕ್ಷರು ಇದ್ದರು.