ಅಂತರಾಷ್ಟ್ರೀಯ ಸ್ಪೋರ್ಟ್ಸ್ ಅಕಾಡೆಮಿ ಸ್ಥಾಪನೆ

Published on

ಬಳ್ಳಾರಿ : ವಿವಿ ಕೇವಲ ಪಠ್ಯ ಚಟುವಟಿಕೆಗಳಿಗೆ ಸೀಮಿತವಾಗದಂತೆ, ಕ್ರೀಡಾ ಚಟುವಟಿಕೆಗಳಿಗೂ ಉತ್ತೇಜನ ನೀಡಲು ನಂದಿಹಳ್ಳಿಯ ಸ್ನಾತಕೋತ್ತರ ಕೇಂದ್ರದಲ್ಲಿ ಅಂತರಾಷ್ಟ್ರೀಯ ಸ್ಪೋರ್ಟ್ಸ್ ಅಕಾಡೆಮಿ ಆರಂಭಿಸಲಾಗುವುದು ಎಂದು ವಿಎಸ್ ಕೆ ವಿವಿ
ಕುಲಪತಿ ಪ್ರೊ.ಎಂ.ಮುನಿರಾಜು ಹೇಳಿದರು.
ನಗರದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ರಾಷ್ಟ್ರಿಯ ಸೇವಾ ಯೋಜನಾ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಐದು ದಿನಗಳ “ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಮಂಗಳವಾರ ವಿದ್ಯುಕ್ತ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಯೋಗ, ವ್ಯಾಯಾಮ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳು ಸಹಕಾರಿಯಾಗಿವೆ. ಪ್ರತಿಯೊಬ್ಬ ವಿದ್ಯಾರ್ಥಿಯು ವಿವಿಯಲ್ಲಿ ಗಿಡ ನೆಟ್ಟು ಪೋಷಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಡಾ.ಪ್ರತಾಪ್ ಲಿಂಗಯ್ಯ ಮಾತನಾಡಿ, ಯುವಕರು ಭಾರತದ ಪ್ರೇರಕ ಶಕ್ತಿಯಾಗಿದ್ದಾರೆ. ಸಮಾಜಕ್ಕೆ ಜವಾಬ್ದಾರಿಯುತ ನಾಗರಿಕರನ್ನು ಕೊಡುಗೆ ನೀಡುವುದು ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಗುರಿಯಾಗಿದೆ.
ದೈಹಿಕ, ಮಾನಸಿಕ ಸದೃಢತೆ ವಿದ್ಯಾರ್ಥಿಗಳು ಕಲಿತುಕೊಂಡಲ್ಲಿ ಸಾಮಾಜಿಕ ಸದೃಢತೆ ತಾನಾಗಿಯೇ ನಿರ್ಮಾಣವಾಗುತ್ತದೆ. ಇದನ್ನು ಎನ್‌ಎಸ್‌ಎಸ್ ಶಿಬಿರಗಳು ಕಲಿಸಿಕೊಡುತ್ತವೆ. ದೇಶದಲ್ಲಿಯೇ ಹೆಚ್ಚು ಎನ್‌ಎಸ್‌ಎಸ್ ಸ್ವಯಂಸೇವಕರನ್ನು ಹೊಂದಿರುವ ರಾಜ್ಯ ನಮ್ಮದಾಗಿದೆ ಎಂದರು.
ವಿವಿ ಕುಲಸಚಿವ ಎಸ್.ಎನ್. ರುದ್ರೇಶ್, ವಿವಿಯ ನಿಕಟಪೂರ್ವ ಕುಲಪತಿ ಪ್ರೊ.ಜೆ.ತಿಪ್ಪೇರುದ್ರಪ್ಪ ಮಾತನಾಡಿದರು. ಶಿಬಿರದಲ್ಲಿ ರಾಜ್ಯದ 21 ವಿಶ್ವವಿದ್ಯಾಲಯಗಳಿಂದ ಆಗಮಿಸಿರುವ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ನಿಷೇಧ ಕುರಿತಾದ ಜಪಾನ್ ಮಾದರಿಯ ಗೊಂಬೆ ನಾಟಕ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net