ಅಂತರರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿದ ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣಕುಮಾರ್

ಅಂತರರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿದ ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣಕುಮಾರ್
Published on

ಹಾಸನ : ಪ್ರಸ್ತುತ ಕಾಲಮಾನದಲ್ಲಿ ತಂತ್ರಜ್ಞಾನಗಳು ಮಾನವ ಸಂಕುಲದ ಒಳಿತಿಗಾಗಿ ಹೊಸ ಆಯಾಮವನ್ನು ಸೃಷ್ಟಿಸುತ್ತಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನದ ಉನ್ನತಿಯು ಮಾನವನ ದೈನಂದಿನ ಕಾರ್ಯಚಟುವಟಿಕೆಗಳನ್ನು ಸುಲಭಗೊಳಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತಿದೆ ಎಂದು ಇಸ್ರೋ ಸಂಸ್ಥೆಯ ಮಾಜಿ ಅಧ್ಯಕ್ಷರು ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಎ. ಎಸ್. ಕಿರಣಕುಮಾರ್ ತಿಳಿಸಿದರು.

ತಾಲೂಕಿನ ಕಾರೆಕೆರೆಯಲ್ಲಿರುವ ಕೃಷಿ ಮಹಾವಿದ್ಯಾಲಯ ಹಾಗೂ ಬೆಂಗಳೂರಿನ ಕಾಂಬೆಟ್ ಸಂಸ್ಥೆ,ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಆವರಣದಲ್ಲಿ ನಡೆದ ಜೈವಿಕ ವಿಜ್ಞಾನದಲ್ಲಿನ ಪ್ರಸ್ತುತ ತಂತ್ರಜ್ಞಾನಗಳು ಮತ್ತು ಅವಕಾಶಗಳು ವಿಷಯದ ಕುರಿತ ಮೂರು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು,ಬಾಹ್ಯಾಕಾಶ ಸಂಸ್ಥೆಯ ಸಂಶೋಧನಾ ಬೆಳವಣಿಗೆಗಳು ಕೃಷಿ ಚಟುವಟಿಕೆಗಳಿಗೆ ಅನುಕೂಲಕರವಾಗುವುದರಿಂದ ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳು ಇದರ ಸದುಪ0ೋಗ ಪಡಿಸಿಕೊಂಡು ಉತ್ತಮ ಸಂಶೋಧನೆಗಳನ್ನು ಕೈಗೊಳ್ಳಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಸ್.ವಿ.ಸುರೇಶ ಮಾತನಾಡಿ, ಕೃಷಿ ಕ್ಷೇತ್ರದ ಬೆಳವಣಿಗೆಯು ಭಾರತವನ್ನು ಆಹಾರ ಕೊರತೆಯ ಹಂತದಿಂದ ಸುಭದ್ರತೆಯ ಕಡೆಗೆ ಕೊಂಡೊಯ್ದಿದ್ದು, ಇದರಲ್ಲಿ ಆಧುನಿಕ ತಂತ್ರಜ್ಞಾನದ ಸಮಯೋಚಿತ ಬಳಕೆಯು ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.

ಖ್ಯಾತ ಪರಿಸರ ವಿಜ್ಞಾನಿ ಡಾ. ಗಣೇಶಯ್ಯ ಮಾತನಾಡಿ, ದೇಶದ ಬೆಳವಣಿಗೆಯಲ್ಲಿ ಮೂರು ಅಂಶಗಳಾದ ಕೃಷಿ, ಪರಮಾಣು ಮತ್ತು ಬಾಹ್ಯಾಕಾಶ ಕ್ಷೇತ್ರಗಳ ಕೊಡುಗೆ ಅಪಾರವಾಗಿದ್ದು ದೇಶ ವಿದೇಶಗಳಲ್ಲಿ ಭಾರತವನ್ನು ಗುರುತಿಸುವ ಪ್ರಮುಖ ಪಾತ್ರ ವಹಿಸಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಾಸನ ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಎಸ್ ಎನ್. ವಾಸುದೇವನ್, ಡಾ. ಎ. ಎಮ್. ಧನಂಜಯ್, ಕೃಷಿ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯ ಸದಸ್ಯರುಗಳಾದ ಡಾ. ಪಿ. ಹೆಚ್. ರಾಮಾಂಜಿನಯ್ಯ, ಟಿ. ಎಮ್. ಅರವಿಂದ್ ಹಾಗೂ ಆರ್. ಶ್ರೀರಾಮ್, ಸುಡಾನ್ ದೇಶದ ವಿಜ್ಞಾನಿ ಡಾ. ಮರ‌್ಮರ್ ಕೆ. ರೆಹಮಾನ್, ಬೆಂಗಳೂರು ಕಾಂಬೆಟ್ ಸಂಸ್ಥೆಯ ಅಧ್ಯಕ್ಷ ಡಾ. ಮಂಜುನಾಥ್ ಕೆ. , ಪ್ರಾಧ್ಯಾಪಕ ಸುನೀಲ್ ದೇಸಾಯಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net