

ಚಿಕ್ಕೋಡಿ: ಗುರುವಿನ ಉಪದೇಶದಿಂದ ಸನ್ಮಾರ್ಗದ ಬೆಳಕು ಮೂಡುತ್ತದೆ ಎಂದು ಕೇರೂರದ ಶರಣ ಕೇದಾರಿಗೌಡ ಪಾಟೀಲ ಹೇಳಿದರು.
ತಾಲೂಕಿನ ಧುಳಗನವಾಡಿ ಗ್ರಾಮದ ಅಪ್ಪಾಸಾಬ ಖೋತ ಪರಿವಾರದ ಆಶ್ರಯದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ 84ನೇ ಸತ್ಸಂಗ ಚಿಂತನಗೋಷ್ಠಿ ಭಜನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಸವಾದಿ ಶಿವಶರಣರಂತೆ ಅಂಗದ ಮೇಲೆ ಲಿಂಗ ಇರಬೇಕು. ಅಂತರಂಗದಲ್ಲಿ ಭಕ್ತಿ ಎಂಬ ಭಂಡಾರ ತುಂಬಿರಬೇಕು. ಪ್ರವಚನ ಆಲಿಸಿ ಮನಸ್ಸಿನ ಮೈಲಿಗೆ ಕಳೆದುಕೊಂಡು ಸನ್ಮಾರ್ಗದೆಡೆಗೆ ಸಾಗಬೇಕು ಎಂದರು.
ಮಾತೋಶ್ರೀ ಸಾವಿತ್ರಿ ವಿಜಯನಗರೆ ಮಾತನಾಡಿ, ಬಸವಾದಿ ಶಿವಶರಣರು ವಚನಗಳ ಮುಖಾಂತರ ಸನ್ಮಾರ್ಗ ತೋರಿದ್ದಾರೆ. ಸತ್ಯ, ಶುದ್ಧ ಕಾಯಕವೇ ಉಸಿರಾಗಬೇಕು ಎಂದರು. ರಾವಣ್ಣ ಖೋತ, ಧನಪಾಲ ಕಮತೆ, ಅಪ್ಪಾಸಾಬ ಖೋತ, ನವಲಿಹಾಳ ಗ್ರಾಮದ ಭಜನಾ ಕಲಾವಿದ ಸುರೇಂದ್ರ ಶೆಟ್ಟಿ ಇತರರಿದ್ದರು.