ಅಂತರಂಗದ ಶುದ್ಧಿಗೆ ಬಸವಣ್ಣನವರ ಸಪ್ತಸೂತ್ರ ಪಾಲಿಸಿ

25blk3
ಭಾಲ್ಕಿಯ ಚನ್ನಬಸವಾಶ್ರಮ ಪರಿಸರದಲ್ಲಿ ಶುಕ್ರವಾರ ಆಯೋಜಿಸಿದ್ದ ವಚನ ದರ್ಶನ ಪ್ರವಚನ ಸಮಾರಂಭವನ್ನು ಗ್ರೇಡ್-೨ ತಹಸೀಲ್ದಾರ್ ಪಲ್ಲವಿ ಬೆಳಕೇರೆ ಉದ್ಘಾಟಿಸಿದರು. ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಅಶ್ವಿನ ಭೋಸ್ಲೆ, ಮಹಾದೇವ ಕುಂಬಾರ, ಗುಂಡಪ್ಪ ಸಂಗಮಕರ್ ಇತರರಿದ್ದರು.
Published on

ಭಾಲ್ಕಿ: ಮನುಷ್ಯನ ಅಂತರಂಗದ ಶುದ್ಧಿಗೆ ಬಸವಣ್ಣನವರ ಸಪ್ತಸೂತ್ರ ಪೂರಕವಾಗಿವೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ನುಡಿದರು.

ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದಿಂದ ಶುಕ್ರವಾರ ಆಯೋಜಿಸಿದ್ದ ೨೦೨೫ನೇ ಸಾಲಿನ ಶ್ರಾವಣ ಮಾಸದ ವಚನ ದರ್ಶನ ಪ್ರವಚನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಪೂಜ್ಯರು, ಇಂದಿನ ಆಧುನಿಕ ಜಗತ್ತಿನಲ್ಲಿ ಮನುಷ್ಯ ತನ್ನ ಐಷಾರಾಮಿ ಜೀವನಕ್ಕೆ ಎಲ್ಲವನ್ನು ಖರೀದಿಸುತ್ತಿದ್ದಾನೆ. ಆದರೆ, ಶಾಂತಿ, ಸಮಾಧಾನ, ನೆಮ್ಮದಿ ಖರೀದಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ವಚನ ಸಾಹಿತ್ಯದದಿಂದ ಅಧ್ಯಯನದಿಂದ ಮಾತ್ರ ಮನುಷ್ಯ ಸಮೃದ್ಧವಾಗಿ ಬದುಕಲು ಸಾಧ್ಯವಿದೆ. ಬಸವಣ್ಣನವರ ಬೋಧಿಸಿದ ಕಳಬೇಡ ಕೊಲಬೇಡ ವಚನದ ಅರ್ಥವನ್ನು ತಿಳಿದು ನಿಜ ಜೀವನದಲ್ಲಿ ಆಚರಣೆ ತಂದರೆ ಬದುಕು ಭವ್ಯ ಮತ್ತು ಸುಂದರವಾಗಲಿದೆ ಎಂದು ತಿಳಿಸಿದರು.

ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ನ ಅಧ್ಯಕ್ಷ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸಿದ್ದರು.

ಗ್ರೇಡ್-೨ ತಹಸೀಲ್ದಾರ್ ಪಲ್ಲವಿ ಬೆಳಕೇರೆ ಪ್ರವಚನ ಉದ್ಘಾಟಿಸಿದರು. ಮಹಾದೇವ ಕುಂಬಾರ ಬಸವ ಗುರುವಿನ ಪೂಜೆ ನೆರವೇರಿಸಿದರು.

ರೋಟರಿ ಕ್ಲಬ್‌ನ ಅಧ್ಯಕ್ಷ ಅಶ್ವಿನ ಭೋಸ್ಲೆ, ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಸಿಕ್ರೇಶ್ವರ ಶೆಟಕಾರ್, ಶಾಂತಕುಮಾರ ನಾಟೇಕರ್, ನಿರ್ಮಲಾ ಚಂದ್ರಕಾಂತ ಪಾಟೀಲ್ ಇತರರಿದ್ದರು.

ಪ್ರವಚನ ಸೇವಾ ಸಮಿತಿ ಅಧ್ಯಕ್ಷ ಗುಂಡಪ್ಪ ಸಂಗಮಕರ್ ಸ್ವಾಗತಿಸಿದರು. ಹಾಸ್ಯ ಕಲಾವಿದ ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು. ರಾಜು ಜುಬರೆ ವಂದಿಸಿದರು. ಗುರುಪ್ರಸಾದ ಶಾಲೆಯ ವಿದ್ಯಾರ್ಥಿಗಳು ವಚನ ನೃತ್ಯ ನಡೆಸಿ ಕೊಟ್ಟರು.

ಪ್ರವಚನಗಳು ಪ್ರತಿಯೊಬ್ಬರಿಗೂ ಜೀವನಕ್ಕೆ ಬೆಳಕು ನೀಡಬಲ್ಲವು. ಪ್ರವಚನದಿಂದ ಸನ್ಮಾರ್ಗ ಸಾಧ್ಯ. ಮಾನಸಿನ ನೆಮ್ಮದಿಗೆ ಪ್ರವಚನ ಔಷಧಿಯಾಗಬಲ್ಲದು. ಅಂತರಂಗ ಶುದ್ಧಿಗೆ ಎಲ್ಲರೂ ಪ್ರವಚನ ಆಲಿಸಬೇಕು.

| ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಅನುಭವ ಮಂಟಪ ಟ್ರಸ್ಟ್​ನ  ಅಧ್ಯಕ್ಷರು ಬಸವಕಲ್ಯಾಣ

ಭಾಲ್ಕಿಯಲ್ಲಿ ಕಳೆದ ನಾಲ್ಕು ದಶಕಗಳಿಂದ ಶ್ರಾವಣ ಮಾಸದಲ್ಲಿ ವಿವಿಧ ವಿಷಯಗಳ ಕುರಿತು ಪ್ರವಚನ ನಡೆಸಿಕೊಂಡು ಬರುತ್ತಿದ್ದಾರೆ. ಈ ಬಾರಿ ವಚನ ದರ್ಶನ ಪ್ರವಚನ ನಡೆಸಿ ಕೊಡುತ್ತಿದ್ದು, ಸದ್ಭಕ್ತರು ಆಲಿಸಬೇಕು.

| ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net