

ತಿಪಟೂರು: ಪರಮಾತ್ಮನು ಎಲ್ಲರ ಅಂತರಂಗದಲ್ಲಿಯೂ ನೆಲೆಸಿರುತ್ತಾನೆ. ದೇವರನ್ನು ನಾವು ಗುಡಿ-ಗೋಪುರದಲ್ಲಿ ನೋಡುವುದಕ್ಕೆ ಮುಂಚೆ ನಮ್ಮಅಂತರಂಗದಲ್ಲಿ ನೆಲೆಸಿರುವ ದೇವರನ್ನು ದರ್ಶನ ಮಾಡಬೇಕು ಎಂದು ಶ್ರೀ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ನಗರದ ಗುರುಕುಲಾನಂದಾಶ್ರಮದಲ್ಲಿ ಸಿಡ್ಲೇಹಳ್ಳಿ ಸಂಸ್ಥಾನ ಮಠದಿಂದ ಆಯೋಜಿಸಿದ್ದ 345ನೇ ಬೆಳದಿಂಗಳ ಶರಣಧರ್ಮ ಚಿಂತನಾಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿ, ಪರಮಾತ್ಮನ ದರ್ಶನವನ್ನು ಪಡೆಯಬೇಕಾದರೆ ಅಂತರಂಗ ಶುದ್ಧಿಯಾಗಿಟ್ಟುಕೊಳ್ಳಬೇಕು. ಶ್ರದ್ಧೆ, ಭಕ್ತಿಯಿಂದ ಪ್ರಾರ್ಥಿಸಿದರೆ ದೇವರ ದರ್ಶನವೂ ಲಭಿಸುತ್ತದೆ ಎಂದರು.
ನಮ್ಮ ಪ್ರಾಣ ಚೈತನ್ಯ ನಮ್ಮಲ್ಲೇ ಇರುತ್ತದೆ. ಅದನ್ನು ನಾವು ಸದಾ ಜಾಗೃತವಾಗಿ ಇಡಬೇಕು. ಎಲ್ಲರೂ ದಿನನಿತ್ಯ ಧ್ಯಾನ ಮಾಡುವುದರ ಮೂಲಕ ಮನಸ್ಸಿನ ಏಕಾಗ್ರತೆ ಸಾಧಿಸಿ ಪ್ರಾಣಚೈತನ್ಯವನ್ನು ಜಾಗೃತಗೊಳಿಸಬೇಕು ಎಂದರು.
ವಿದ್ಯಾನಿಧಿ ಪಿಯು ಕಾಲೇಜು ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಎಸ್.ಅಶೋಕ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕ ಗಳಿಸುವುದರ ಹಿಂದೆ ಬಿದ್ದಿದ್ದಾರೆ. ಶಿಕ್ಷಕರು ಸಿಲಬಸ್ ಮುಗಿಸುವ ಧಾವಂತದಲ್ಲಿರುತ್ತಾರೆ. ಶಿಕ್ಷಣ ಸಂಸ್ಥೆಗಳು ಉತ್ತಮ ಫಲಿತಾಂಶ ಪಡೆಯುವುದಕ್ಕೆ ತಮ್ಮ ದೃಷ್ಟಿ ಕೇಂದ್ರೀಕರಿಸಿರುತ್ತಾರೆ. ಇವೆಲ್ಲವುದರ ನಡುವೆ ಮಕ್ಕಳಿಗೆ ನೀತಿ ಶಿಕ್ಷಣ ಹಾಗೂ ಧಾರ್ಮಿಕ ಚಿಂತನೆಯ ಪರಿಚಯ ಎಂಬುದು ಮರೀಚಿಕೆಯಾಗುತ್ತಿದೆ. ಈ ಕಾಲಘಟ್ಟದಲ್ಲಿ ಗುರುಕುಲಾನಂದಾಶ್ರಮ ಮಠದಲ್ಲಿ ವಿದ್ಯಾರ್ಥಿಗಳಿಗೆ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿ ಮಕ್ಕಳನ್ನು ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ ಎಂದರು.
ಗುರುಕುಲ ಸಂಸ್ಥೆ ಸಿಇಒ ಕ್ಯಾಪ್ಟನ್ ಬಿ.ಎಂ.ಹರಿಪ್ರಸಾದ್, ಕಾರ್ಯದರ್ಶಿ ಸಿದ್ದರಾಮಯ್ಯ, ವ್ಯವಸ್ಥಾಪಕ ರವಿಶಂಕರ್, ದಕ್ಷಿಣಮೂರ್ತಿ, ತೀರ್ಥಪ್ರಸಾದ್ ಇತರರು ಉಪಸ್ಥಿತರಿದ್ದರು.