ಅಂಡರ್‌ಪಾಸ್ ನಿರ್ವಹಣೆ ಮರೆತ ಕಂಪನಿ, ಧೂಳು ತುಂಬಿ ಕೊಂಪೆಯಾದ ಮಾರ್ಗ ಸಮರ್ಪಕ ನಿರ್ವಹಣೆಗೆ ಮನವಿ

12 Nelaph 02
Published on

ಜಿ.ಕೆ.ಸುಗ್ಗರಾಜು ನೆಲಮಂಗಲ

ರಾಷ್ಟ್ರೀಯ ಹೆದ್ದಾರಿ 48ರ ಕುಣಿಗಲ್ ವೃತ್ತದ ಬಳಿ ಪಾದಚಾರಿಗಳಿಗೆಂದು ನಿರ್ಮಿಸಿರುವ ಅಂಡರ್‌ಪಾಸ್‌ನ ನಿರ್ವಹಣೆ ಮಾಡುವಲ್ಲಿ ದೇವಿಹಳ್ಳಿ ರಸ್ತೆ ಅಭಿವೃದ್ಧಿ ಕಂಪನಿ ನಿರ್ಲಕ್ಷ್ಯವಹಿಸಿದೆ.

ಕಂಪನಿಯು ಅಂಡರ್‌ಪಾಸ್ ನಿರ್ವಹಣೆ ಮಾಡದ ಕಾರಣ ಧೂಳು ತಂಬಿ, ಕೊಂಪೆಯಾಗಿದೆ. ಸಾರ್ವಜನಿಕರ ಜೀವಭಯದಲ್ಲೇ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಅಂಡರ್‌ಪಾಸ್ ನಿರ್ಮಿಸಿ ಹತ್ತಾರು ವರ್ಷಗಳೇ ಕಳೆದಿದ್ದರೂ ಇದುವರೆಗೂ ಒಳಭಾಗದಲ್ಲಿ ತುಂಬಿರುವ ಕಸ ವಿಲೇವಾರಿ ಮಾಡಿಲ್ಲ. ವಿದ್ಯುತ್ ದೀಪ ಅಳವಡಿಸಿಲ್ಲ, ರಾತ್ರಿ ವೇಳೆ ಪಾದಚಾರಿಗಳ ಸುರಕ್ಷತೆ ದೃಷ್ಟಿಯಿಂದ ಭದ್ರತಾ ಸಿಬ್ಬಂದಿ ನೇಮಕ ಮಾಡಬೇಕೆಂಬ ಹೆದ್ದಾರಿ ಪ್ರಾಧಿಕಾರದ ನಿಯಮಗಳನ್ನು ಕಂಪನಿ ಗಾಳಿಗೆ ತೂರಿದೆ.

ನಿರ್ವಹಣೆ ಕೊರತೆಯಿಂದಾಗಿ ಸಾರ್ವಜನಿಕರು ಅಂಡರ್‌ಪಾಸ್ ಉಪಯೋಗಿಸುತ್ತಿಲ್ಲವಾದ್ದರಿಂದ ರಾತ್ರಿ ವೇಳೆ ಪುಂಡರು ಅನೈತಿಕ ಚುಟುವಟಿಕೆಗಳ ತಾಣವನ್ನಾಗಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿದಿದ್ದರೂ ಯಾರೊಬ್ಬರೂ ತಲೆಕೆಡಿಸಿಕೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಮನವಿಗೆ ಸ್ಪಂದಿಸದ ಅಧಿಕಾರಿಗಳು: ಕಸದ ರಾಶಿ ವಿಲೇವಾರಿ ಮಾಡುವಂತೆ ಕಂಪನಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಂಡರ್‌ಪಾಸ್ ನಗರಸಭೆ ವ್ಯಾಪ್ತಿಯಲ್ಲಿದ್ದರೂ ಸ್ವಚ್ಛತೆ ಕಾಪಾಡುತ್ತಿದ್ದಾರೆಯೇ ಎಂಬ ಮೇಲ್ವಿಚಾರಣೆ ಮಾಡಬೇಕಾದ ನಗರಸಭೆ ಅಧಿಕಾರಿಗಳೂ ಅತ್ತ ಸುಳಿಯದಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.

ಸಮಸ್ಯೆ ಇತ್ಯರ್ಥಕ್ಕೆ ಪಟ್ಟು: ಅಂಡರ್‌ಪಾಸ್ ಅನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕಾದ ದೇವಿಹಳ್ಳಿ ಕಂಪನಿ ನೆಪಮಾತ್ರಕ್ಕೆ ನಿರ್ಮಾಣ ಮಾಡಿ ನಿರ್ವಹಣೆಗೆ ನಿರ್ಲಕ್ಷ್ಯವಹಿಸಿದೆ. ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಹಾದುಹೋಗುವ ವಾಹನ ಸವಾರರ ಬಳಿ ಸುಂಕ ವಸೂಲಿ ಸಂಗ್ರಹಿಸಿಕೊಳ್ಳಲು ಮಾತ್ರ ಕಂಪನಿ ಆಸಕ್ತಿ ತೋರುತ್ತಿದೆ. ಬಂಡವಾಳ ಮತ್ತು ಲಾಭದ ಕಡೆ ಗಮನಹರಿಸದೆ ಸಾರ್ವಜನಿಕರಿಗೆ ನೀಡಬೇಕಾದ ಸೌಲಭ್ಯ ಒದಗಿಸಿಕೊಡಲಿ ಎಂದು ಸ್ಥಳೀಯ ನಿವಾಸಿ ವಿಜಯ್ ವೀಳೆದೆಲೆ ಒತ್ತಾಯಿಸಿದ್ದಾರೆ.

ಅಂಡರ್‌ಪಾಸ್ ಅನೈತಿಕ ಚುಟುವಟಿಕೆಗಳ ತಾಣವಾಗುತ್ತಿದೆ ಎಂಬ ಕಾರಣಕ್ಕೆ ಅದನ್ನು ಮುಚ್ಚಲಾಗಿತ್ತು. ಸಮಸ್ಯೆಗೆ ಸಂಬಂಧಿಸಿದಂತೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು. ಕಿರಣ್‌ಕುಮಾರ್, ದೇವಿಹಳ್ಳಿ ಟೋಲ್ ಉಪವ್ಯವಸ್ಥಾಪಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net