ಅಂಟಿಕೆ ಪಿಂಟಿಕೆ ಕಲೆಗೆ ಪ್ರೋತ್ಸಾಹ

kls anikei
ಕಳಸದಲ್ಲಿ ನಡೆದ ಅಂಟಿಕೆ ಪಿಂಟಿಕೆ ಕಾರ್ಯಕ್ರಮದಲ್ಲಿ ಕಲಾವಿದರಾದ ವೀರಪ್ಪ ಗೌಡ, ಚಂದ್ರೇಗೌಡ, ವಿಘ್ನೇಶ್ ಅವರನ್ನು ಕರ್ನಾಟಕ ಜಾನಪದ ಪರಿಷತ್‌ನಿಂದ ಗೌರವಿಸಲಾಯಿತು. ಮಮ್ತಾಜ್ ಬೇಗಂ, ಸುಮನಾ, ನಿಖಿತಾ, ಎಚ್.ಆರ್.ಪ್ರಶಾಂತ್, ಅ.ರಾ.ಸತೀಶ್ಚಂದ್ರ ಇತರರಿದ್ದರು.
Published on

ಕಳಸ: ಕರ್ನಾಟಕ ಜಾನಪದ ಪರಿಷತ್ತು ಕಳಸ ಘಟಕದಿಂದ ಸೋಮವಾರ ಮಲೆನಾಡಿನ ವಿಶಿಷ್ಟ ಕಲೆ ಅಂಟಿಕೆ ಪಿಂಟಿಕೆ ತಂಡವನ್ನು ಬರಮಾಡಿಕೊಂಡು ಹಿರಿಯ ಕಲಾವಿದರನ್ನು ಗೌರವಿಸಲಾಯಿತು.

ಅಂಟಿಕೆ ಪಿಂಟಿಕೆ ಎಂದರೆ ದೀಪದಿಂದ ದೀಪಗಳನ್ನು ಬೆಳಗಿಸುವ ಪದ್ಧತಿ. ದೀಪಾವಳಿಯ ಬಲಿಪಾಡ್ಯಮಿ ದಿನದಿಂದ ಮೂರು ದಿನಗಳವರೆಗೆ ರಾತ್ರಿ ಮನೆಮನೆಗೆ ತೆರಳಿ ದೀಪದಿಂದ ದೀಪ ನೀಡುವ ಸಂಪ್ರದಾಯವಿದು. ಜಾನಪದ ಸೊಗಡಿನ ಕಥಾಹಂದರದ ಹಾಡು ಹಾಡುವುದು, ವಿವಿಧ ವೇಷಧಾರಿಗಳಿಂದ ಕುಣಿತದೊಂದಿಗೆ ಮನರಂಜನೆ ನೀಡುತ್ತ ದೀಪಾವಳಿಗೆ ತನ್ನದೆ ಆದ ಮೆರುಗು ನೀಡುತ್ತಾರೆ. ಮನರಂಜನೆ ಜತೆಗೆ ಬದುಕಿನ ಸಂದೇಶವನ್ನೂ ಹೇಳುತ್ತದೆ. ಈ ಸಂಪ್ರದಾಯಕ್ಕೆ ಅನೇಕ ವರ್ಷಗಳ ಹಿನ್ನೆಲೆ ಇದ್ದರೂ ಇದರ ಆಕರ್ಷಣೆೆ ಸ್ವಲ್ಪ ಕಡಿಮೆಯಾಗಿರುವುದು ನಿಜ.

ಕಳಸ ತಾಲೂಕಿನಲ್ಲಿ ಹಲವಾರು ವರ್ಷಗಳಿಂದ ಸಾಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿದ್ದ ಅಂಟಿಕೆ ಪಿಂಟಿಕೆ ಆಚರಣೆ ಕರೊನಾ ನಂತರ ಸ್ಥಗಿತಗೊಂಡಿತ್ತು. ಈ ಬಾರಿ ಮತ್ತೆ ಪ್ರಾರಂಭಗೊಂಡ ಕಳಸದ ಮುಮ್ಮಗೆ ಅಂಟಿಕೆ ಪಿಂಟಿಕೆ ತಂಡ ಕೊಟ್ಟಿಗೆಮಕ್ಕಿ ಸತೀಶ್ ಭಟ್ ಅವರ ಮನೆಗೆ ಬಂದ ಸಂದರ್ಭದಲ್ಲಿ ಕರ್ನಾಟಕ ಜಾನಪದ ಪರಿಷತ್ ಸದಸ್ಯರು ಭಾಗವಹಿಸಿ ಕಲಾವಿದರನ್ನು ಗೌರವಿಸುವ ಮೂಲಕ ಪ್ರೋತ್ಸಾಹಿಸಿದರು.

ಅಂಟಿಕೆ ಪಿಂಟಿಕೆ ಕೂಟದ ಯಜಮಾನ ವೀರಪ್ಪ ಗೌಡ, ಹಾಡುಗಾರರಾದ ಚಂದ್ರೇಗೌಡ, ವಿಘ್ನೇಶ್ ಅವರನ್ನು ಗೌರವಿಸಲಾಯಿತು.

ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಮಮ್ತಾಜ್ ಬೇಗಂ, ಕಜಾಪ ಸದಸ್ಯರಾದ ಸುಮನಾ ಜಯರಾಜ್, ನಿಖಿತಾ ಸಂತೋಷ್, ಶಮೀರ್, ಎಚ್.ಆರ್.ಪ್ರಶಾಂತ್, ಪ್ರಿಯಾ ಗುರುಪ್ರಸಾದ್, ಕಸಾಪ ಸದಸ್ಯರಾದ ಜಾನಕಿ ಸುಂದರೇಶ್, ರೇವತಿ ಶಿವಪ್ಪ, ಪ್ರತಿಮಾ, ಲೀಲಾ ಶ್ರೀಕಾಂತ್, ರಾಧಿಕಾ, ಪೌಜಿಯಾ, ನಾಗಮಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net