

ಶಹಾಬಾದ್: ನಗರಸಭೆಗೆ ಚುನಾವಣೆ ನಡೆದು 26 ತಿಂಗಳ ನಂತರ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಂಜಲಿ ಕಂಬಾನೂರ, ಉಪಾಧ್ಯಕ್ಷರಾಗಿ ಸಲೀಮಾ ಬೇಗಂ ಆಯ್ಕೆಯಾಗಿದ್ದಾರೆ. ಪಜಾ(ಮಹಿಳೆ) ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನ ಅಂಜಲಿ ಕಂಬಾನೂರ, ಬಿಜೆಪಿಯಿಂದ ಪಾರ್ವತಿ ಪವಾರ ನಾಮಪತ್ರ ಸಲ್ಲಿಸಿದ್ದರು.
ಉಪಾಧ್ಯಕ್ಷ (ಸಾಮಾನ್ಯ)ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಸಲೀಮಾ ಬೇಗಂ, ಬಿಜೆಪಿಯ ಸುಧಾ ನಿಕ್ಕಮ್ಮ ನಾಮಪತ್ರ ಸಲ್ಲಿಸಿದ್ದರು. ಒಟ್ಟು 27 ನಗರ ಸಭೆ ಸದಸ್ಯ ಬಲದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದರಿಂದ 26 ಸ್ಥಾನದಲ್ಲಿ ಕಾಂಗ್ರೆಸ್ 22, ಬಿಜೆಪಿ 4 ಸ್ಥಾನ ಹೊಂದಿದ್ದವು. ಕೈ ಎತ್ತುವ ಮೂಲಕ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ, ಉಪಾಧ್ಯಕ್ಷರು 22 ಮತಗಳನ್ನು ಪಡೆದರೆ, ಬಿಜೆಪಿ ಅಧ್ಯಕ್ಷ, ಉಪಾಧ್ಯಕ್ಷ ಅಭ್ಯರ್ಥಿಗಳು 4 ಮತಗಳನ್ನು ಪಡೆದರು.
ಸೇಡಂ ಸಹಾಯಕ ಆಯುಕ್ತ ರಮೇಶ ಕೋಲಾರ, ತಹಸೀಲ್ದಾರ್ ಸುರೇಶ ವಮರ್ಾ, ಪೌರಾಯುಕ್ತ ಕೆ.ಗುರುಲಿಂಗಪ್ಪ, ಕಂದಾಯ ಅಧಿಕಾರಿ ಸುನೀಲಕುಮಾರ, ನೈರ್ಮಲ್ಯ ನಿರೀಕ್ಷಕ ಶಿವುಕುಮಾರ, ಸುರೇಶ ವನಹಳ್ಳಿ, ಸಾಬಣ್ಣ ಸುಂಗಲಕರ್ ಇದ್ದರು.
ಪೈಪೋಟಿ: ನಗರ ಸಭೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಒಟ್ಟು ನಾಲ್ಕು ಜನ ಆಕಾಂಕ್ಷಿಯಾಗಿದ್ದರು. ಕೊನೆಯ ಹಂತದಲ್ಲಿ ಪೀರಮ್ಮಾ ಪಗಲಾಪುರ, ಅಂಜಲಿ ಕಂಬಾನೂರ ಅವರ ನಡುವೆ ಪಕ್ಷದಲ್ಲಿಯೇ ತೀವ್ರ ಪೈಪೋಟಿ ನಡೆದಿತ್ತು. ಮಾದಿಗ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ಪೀರಮ್ಮ ಪೈಪೋಟಿ ನಡೆಸಿದ್ದರು. ಮುಖಂಡ ವಿಜಯಕುಮಾರ ಜಿ.ಆರ್. ಪೀರಮ್ಮ ಅವರ ಬೆಂಬಲಿಗರ ನಡುವೆ ತೀವ್ರ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಕೊನೆಗೆ ಪಕ್ಷದ ಹೈಕಮಾಂಡ ಅಂಜಲಿ ಅವರಿಗೆ ಅಧ್ಯಕ್ಷ ಸ್ಥಾನಕ್ಕೆ ಹೆಸರು ಘೋಷಿಸಿತು.
ಶುಕ್ರವಾರದವರೆಗೂ ಕಾಂಗ್ರೆಸ್ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಡಾ. ಅಹ್ಮದ ಪಟೇಲ್ ಹೆಸರು ಕೇಳಿ ಬಂದಿತ್ತು. ಎಷ್ಟೋ ಜನ ಅವರನ್ನು ಅಭಿನಂದಿಸಿದ್ದರು. ಕೊನೆಯ ಘಳಿಗೆಯ ನಾಟಕೀಯ ಬೆಳವಣಿಗೆಯಲ್ಲಿ ಸಲೀಮಾ ಬೇಗಂ ಉಪಾಧ್ಯಕ್ಷರ ಸ್ಥಾನಕ್ಕೆ ಘೋಷಿಸಲಾಯಿತು.
ವಿಜಯೋತ್ಸವ: ಗೆಲುವಿನ ನಂತರ ನಗರ ಸಭೆ ಆವರಣದಲ್ಲಿರುವ ಡಾ.ಬಾಬು ಜಗಜೀವನರಾಮ, ಡಾ.ಆಂಬೇಡ್ಕರ್ ಮೂತರ್ಿಗೆ ಮಾಲಾರ್ಪಣೆ ಮಾಡಿದರು. ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಪಕ್ಷದ ವೀಕ್ಷಕರಾದ ಮಜರ ಅಲಿಖಾನ್, ಸಂತೋಷ ಪಾಟೀಲ ಡೊಣ್ಣೂರ, ಜಿಪಂ ಸದಸ್ಯ ಶಿವಾನಂದ ಪಾಟೀಲ, ಎಪಿಎಂಸಿ ಸದಸ್ಯ ಸಿದ್ದುಗೌಡ ಅಫಜಲಪುರಕರ್, ಕಾಂಗ್ರೆಸ್ ಮುಖಂಡ ವಿಜಯಕುಮಾರ ಜಿ.ಆರ್. ಬಿಸಿಸಿ ಅಧ್ಯಕ್ಷ ಡಾ.ಎಂ.ಎ.ರಶೀದ, ವಿಜಯಕುಮಾರ ಮುಟ್ಟತ್ತಿ, ಮೃತ್ಯುಂಜಯ ಸ್ವಾಮಿ ಹಿರೇಮಠ, ರಾಜೇಶ ಯನಗುಂಟಿಕರ್, ಗಿರೀಶ ಕಂಬಾನೂರ, ಸುರೇಶ ನಾಯಕ, ಫಜಲ್ ಪಟೇಲ್, ಮಹಿಬೂಬ, ನಗರ ಸಭೆ ಸದಸ್ಯರು ಕಾರ್ಯಕರ್ತರು ಪಾಲ್ಗೊಂಡಿದ್ದರು.