

ಸೋಮವಾರಪೇಟೆ: ಕೊಡಗು ನಾವು ಪ್ರತಿಷ್ಠಾನದಿಂದ ಪಟ್ಟಣದ ಚನ್ನಬಸಪ್ಪ ಸಭಾಂಗಣದಲ್ಲಿ 500 ವೀರಪುತ್ರರ ಐತಿಹಾಸಿಕ ಅಂಚೆ ಲಕೋಟೆಗಳ ಪ್ರದರ್ಶನ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಒಕ್ಕಲಿಗರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎ.ಆರ್.ಮುತ್ತಣ್ಣ ಮಾತನಾಡಿ, ಪ್ರತಿ ಶಾಲೆಗಳಲ್ಲೂ ಹಳೇ ನಾಣ್ಯ ಮತ್ತು ಲಕೋಟೆಗಳ ಪ್ರದರ್ಶನ ಆಯೋಜಿಸಬೇಕು. ಇದರಿಂದ ವಿದ್ಯಾರ್ಥಿಗಳಿಗೆ ನಮ್ಮ ದೇಶದ ಸಾಧಕರ ಸಾಧನೆ ತಿಳಿಯಲು ಸಾಧ್ಯ ಎಂದು ಹೇಳಿದರು.
ಅಂಚೆ ಲಕೋಟೆ ಸಂಗ್ರಹಕಾರರಾದ ಎಚ್.ಕೆ.ಸತೀಶ್ ಮಾತನಾಡಿ, ನಮ್ಮ ದೇಶದ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಲಕೋಟೆಗಳನ್ನು ಸಂಗ್ರಹಿಸಲಾಗಿದೆ. ಇದನ್ನು ಸಂಪೂರ್ಣ ತಿಳಿದುಕೊಂಡಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯೋಗವಾಗಲಿದೆ ಎಂದರು.
ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪುರಸ್ಕೃತ ಎಚ್.ಕೆ.ಸತೀಶ್ ಅವರು ನಾಣ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಕಾರ್ಯಕ್ರಮ ಉದ್ಘಾಟಿಸಿದರು. ಪ್ರತಿಷ್ಠಾನದ ಸ್ಥಾಪಕರಾದ ಗೌತಮ್ ಕಿರಗಂದೂರು, ಸುಮನಾ ಗೌತಮ್, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಪದವೀಧರ ಮುಖ್ಯ ಶಿಕ್ಷಕಿ ಎಂ.ಜೆ.ಅಣ್ಣಮ್ಮ, ವಕೀಲ ದೀಪಕ್, ಮಾಜಿ ಸೈನಿಕ ಎಂ.ವಿ.ಚಂದ್ರಶೇಖರ್, ರೋಟರಿ ಕಾರ್ಯದರ್ಶಿ ಆದರ್ಶ್, ಉದ್ಯಮಿ ಗಿರೀಶ್ ಮಲ್ಲಪ್ಪ, ರೈತ ಮುಖಂಡ ಜಿ.ಎಂ.ಹೂವಯ್ಯ ಇದ್ದರು.