ಅಂಚೆ ಚೀಟಿ ಬಿಡುಗಡೆಗೆ ಆಗ್ರಹ

h20-shri shantisagar
Published on

ಹುಬ್ಬಳ್ಳಿ: ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರ ಸ್ಮರಣಾರ್ಥ ಕೇಂದ್ರ ಸರ್ಕಾರ ಅಂಚೆ ಚೀಟಿ ಬಿಡುಗಡೆ ಮಾಡಬೇಕೆಂದು ಹುಬ್ಬಳ್ಳಿ ಜೈನ್ ಸಮಾಜದ ಪ್ರಮುಖರು ಆಗ್ರಹಿಸಿದ್ದಾರೆ.

ನಗರದ ಮಹಾವೀರಗಲ್ಲಿಯ ಶಾಂತಿನಾಥ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶಾಂತಿಸಾಗರ ಮಹಾರಾಜರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಸಮಾಜದ ಪ್ರಮುಖರು ಆಗ್ರಹಿಸಿದರು.

20ನೇ ಶತಮಾನದ ಪ್ರಥಮ ದಿಗಂಬರ ಆಚಾರ್ಯರಾಗಿ ದೇಶದ ಉದ್ದಗಲಕ್ಕೂ ಪಾದಯಾತ್ರೆ ಮಾಡಿ ಸಮಾಜದಲ್ಲಿನ ಕಂದಾಚಾರಗಳು, ಬಲಿಪದ್ಧತಿ, ಹಿಂಸೆ, ಬಾಲ್ಯವಿವಾಹ ಮುಂತಾದ ಅನಿಷ್ಟ ಪದ್ಧತಿಗಳ ವಿರುದ್ಧ ಜನ ಜಾಗೃತಿ ಮೂಡಿಸುತ್ತ ಸಮಾಜದಲ್ಲಿ, ದೇಶದಲ್ಲಿ ಶಾಂತಿ-ಅಹಿಂಸೆ-ಏಕತೆಯ ಸ್ಥಾಪನೆಗೆ ಶ್ರೀ ಶಾಂತಿಸಾಗರ ಮಹಾರಾಜರು ಶ್ರಮಿಸಿದ್ದರು ಎಂದು ಸ್ಮರಿಸಲಾಯಿತು.

ಜೈನ್ ಸಮಾಜದ ಅಧ್ಯಕ್ಷ ಮಹಾವೀರ ಸೂಜಿ, ಮಾಜಿ ಅಧ್ಯಕ್ಷ ಶಾಂತಿನಾಥ ಹೋತಪೇಟಿ, ಶಾಂತಿನಾಥ ಭವನ ಟ್ರಸ್ಟ್ ಅಧ್ಯಕ್ಷ ಮಹಾವೀರ ಗೊಂಗಡಿ, ಸಂಸ್ಕಾರ ಶಾಲೆಯ ಅಧ್ಯಕ್ಷ ಮಹಾವೀರ ಕುಂದೂರ, ಇತರರು ಮಾತನಾಡಿದರು.

ಶ್ರೀ ಶಾಂತಿಸಾಗರ ಮಹಾರಾಜರು ಹಾಗೂ ಹುಬ್ಬಳ್ಳಿಯ ಆಚಾರ್ಯ ಶ್ರೀ ನಿಜಾನಂದಸಾಗರರ ಸ್ಮರಣೆಯಲ್ಲಿ ವಾಚನಾಲಯವನ್ನು ಆರಂಭಿಸುವುದಾಗಿ ತಿಳಿಸಲಾಯಿತು. ವಿಶೇಷ ಪೂಜೆ, ಆಚಾರ್ಯ ಅಷ್ಟಕ, ಅಷ್ಟದ್ರವ್ಯಪೂಜೆ, ಪುಷ್ಪ ಸಮರ್ಪಣೆ, ಆರತಿಗಳು ನಡೆದವು.

ಜೈನ್ ಬೋರ್ಡಿಂಗ್​ನಲ್ಲಿ: ಸ್ಟೇಷನ್ ರಸ್ತೆಯ ದಿಗಂಬರ ಜೈನ್ ಬೋರ್ಡಿಂಗ್​ನಲ್ಲಿ ಆಚಾರ್ಯಶ್ರೀ ಶಾಂತಿಸಾಗರರ ಪುತ್ಥಳಿ ಸಮ್ಮುಖದಲ್ಲಿ ಪುಣ್ಯತಿಥಿ ಕಾರ್ಯಕ್ರಮ ನಡೆಯಿತು. ದಕ್ಷಿಣ ಭಾರತ ಜೈನ್ ಸಭೆಯ ಉಪಾಧ್ಯಕ್ಷ ದತ್ತಾ ಡೋರ್ಲೆ, ಮಹಾವೀರ ಸೂಜಿ, ಶಾಂತಿನಾಥ ಹೋತಪೇಟಿ, ಜೈನ್ ಬೋರ್ಡಿಂಗ್ ಅಧೀಕ್ಷಕ ಆರ್.ಟಿ. ತವನಪ್ಪನವರ ಆಚಾರ್ಯರ ಮಹಿಮೆಯನ್ನು ಕೊಂಡಾಡಿದರು. ಕಂಚಗಾರಗಲ್ಲಿಯ ಶ್ರೀ ಆದಿನಾಥ ಬಸದಿಯಲ್ಲಿ ಆಚಾರ್ಯ ಶ್ರೀಗಳ ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net