ಅಂಚೆ ಕಚೇರಿ ಮುಂಭಾಗ ವ್ಯಾಪಾರಕ್ಕೆ ಅವಕಾಶ ನೀಡದಂತೆ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ

WEB @@@
Published on

ಸಾಗರ: ನಗರದ ಪ್ರಧಾನ ಅಂಚೆ ಕಚೇರಿ ಮುಂಭಾಗ ಬೀದಿಬದಿ ವ್ಯಾಪಾರಿಗಳಿಗೆ ಸ್ಥಳಾವಕಾಶ ಕಲ್ಪಿಸಲು ಮುಂದಾಗಿರುವ ನಗರಸಭೆ ಕ್ರಮವನ್ನು ಖಂಡಿಸಿ ಸೋಮವಾರ ಕಾಂಗ್ರೆಸ್ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ ನಡೆಸಲಾಯಿತು.

ನಗರಸಭೆ ಬೀದಿಬದಿ ವ್ಯಾಪಾರಿಗಳಿಗೆ ಸ್ಥಳಾವಕಾಶ ಕಲ್ಪಿಸಲು ಮುಂದಾಗಿರುವ ರಸ್ತೆಯಲ್ಲಿ ಅಂಚೆ ಕಚೇರಿ, ಗಣಪತಿ ಬ್ಯಾಂಕ್, ಆಸ್ಪತ್ರೆಗಳಿವೆ. ರಸ್ತೆಯ ಒಂದು ಭಾಗದ ಚರಂಡಿ ಮೇಲೆ ಚಪ್ಪಡಿ ಕಲ್ಲು ಹಾಕಿ ಗೂಡಂಗಡಿಗಳಿಗೆ ಅವಕಾಶ ಮಾಡಿಕೊಟ್ಟರೆ ಸಂಚಾರ ವ್ಯವಸ್ಥೆ ಅಸ್ಥಿರಗೊಳ್ಳುವ ಸಾಧ್ಯತೆ ಇದೆ ಎಂದು ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಐ.ಎನ್.ಸುರೇಶಬಾಬು ಮಾತನಾಡಿ, ಈ ಹಿಂದೆ ಇಲ್ಲಿ ಪಾನಿಪುರಿ ಇತರ ಅಂಗಡಿಗಳನ್ನು ಇರಿಸಲಾಗಿತ್ತು. ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ತೊಂದರೆ ಆಗುತ್ತದೆ ಎಂದು ಸಾರ್ವಜನಿಕರ ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳಾಂತರಿಸಲಾಗಿತ್ತು. ಈಗ ಪುನಃ ಗೂಡಂಗಡಿ ತೆರೆಯಲು ನಗರಸಭೆ ಅವಕಾಶ ಕಲ್ಪಿಸುತ್ತಿದೆ. ಇಲ್ಲಿ ಬ್ಯಾಂಕ್, ಅಂಚೆ ಕಚೇರಿ, ಆಸ್ಪತ್ರೆ ಎಲ್ಲವೂ ಇದೆ. ಸಾರ್ವಜನಿಕರು ವಾಹನ ನಿಲ್ಲಿಸಲು ಪರದಾಡುತ್ತಿದ್ದಾರೆ. ಮತ್ತೆ ಗೂಡಂಗಡಿಗಳಿಗೆ ಅವಕಾಶ ಕಲ್ಪಿಸುವುದು ಸರಿಯಲ್ಲ. ನಗರಸಭೆ ಇವರಿಗೆ ಪರ್ಯಾಯ ಜಾಗ ನೀಡಬೇಕು. ಇಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಬಾರದು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net