

ಮೈಸೂರು: ನಗರದ ನಿವಾಸಿ, ಗೃಹಿಣಿ ಎಸ್.ಪಿ.ಮಾಲತಿ ಅವರ ಅಂಗಾಂಗ ದಾನದಿಂದ ಏಳು ಜನರ ಪ್ರಾಣ ಉಳಿದಿದೆ.
ನಂಜನಗೂಡು ರಸ್ತೆಯ ಆರ್‌ಎಂಸಿ ಬಳಿ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇವರನ್ನು ಅಪೊಲೋ ಬಿಜಿಎಸ್ ಆಸ್ಪತ್ರೆಗೆ ಡಿ.31ರಂದು ಕರೆತರಲಾಗಿತ್ತು. ಸಿಟಿ ಸ್ಕ್ಯಾನ್‌ನಿಂದ ಅವರ ಮಿದುಳು ಕಾಂಡವು ಊದಿಕೊಂಡಿರುವುದು ಪತ್ತೆಯಾಯಿತು. ತಕ್ಷಣ ಅವರನ್ನು ಜೀವ ರಕ್ಷಕ ವ್ಯವಸ್ಥೆ ಮತ್ತು ತುರ್ತು ಆರೈಕೆಗಾಗಿ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಯಿತು.
ಜ.1ರಂದು ಅವರ ಮಿದುಳು ನಿಷ್ಕ್ರಿಯವಾಗಿರುವುದು ಖಚಿತವಾಯಿತು. ಹಾಗಾಗಿ, ಕುಟುಂಬ ಸದಸ್ಯರೊಂದಿಗೆ ಅಂಗಾಂಗ ದಾನದ ಕುರಿತು ಸಮಾಲೋಚನೆ ನಡೆಸಲಾಯಿತು. ಬಳಿಕ ಕುಟುಂಬದವರು ಅಂಗಾಂಗ ದಾನಕ್ಕೆ ಸಮ್ಮತಿಸಿದರು.
ಸೋಮವಾರ ಬೆಳಗ್ಗೆ ಮಾಲತಿ ಅವರ ಅಂಗಾಂಗಗಳನ್ನು (ಶ್ವಾಸಕೋಶಗಳು, ಎರಡು ಮೂತ್ರಪಿಂಡ, ಒಂದು ಯಕೃತ್ತು, ಹೃದಯ ಕವಾಟಗಳು, ಕಾರ್ನಿಯಾಗಳು) ಬೇರ್ಪಡಿಸಲಾಯಿತು. 9.09ರ ಹೊತ್ತಿಗೆ ಅಪೊಲೋ ಬಿಜಿಎಸ್ ಹಾಸ್ಪಿಟಲ್ಸ್‌ನಲ್ಲಿ ಕ್ರಾಸ್‌ಕ್ಲಾಂಪ್ ಪ್ರಕ್ರಿಯೆ ಮೂಲಕ ಅಂಗಾಂಗ ಕಸಿಯನ್ನು ಪೂರ್ಣಗೊಳಿಸಲಾಯಿತು.
ಶ್ವಾಸಕೋಶವನ್ನು ಕಿಮ್ಸ್ ಆಸ್ಪತ್ರೆಗೆ ಕಳುಹಿಸಲು ಸಿಕಂದರಾಬಾದ್‌ಗೆ ಏರ್‌ಲಿಫ್ಟ್ ಮಾಡಲಾಯಿತು. ಯಕೃತ್ತು, ಎಡ ಮೂತ್ರಪಿಂಡವನ್ನು ಅಪೊಲೋ ಬಿಜಿಎಸ್ ಆಸ್ಪತ್ರೆಗೆ, ಬಲ ಮೂತ್ರಪಿಂಡವನ್ನು ನಗರದ ಜೆಎಸ್‌ಎಸ್ ಆಸ್ಪತ್ರೆಗೆ, ಹೃದಯ ಕವಾಟಗಳನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ, ಕಾರ್ನಿಯಾಗಳನ್ನು ನಗರದ ಕೆ.ಆರ್. ಆಸ್ಪತ್ರೆಗೆ ರವಾನಿಸಲಾಯಿತು ಎಂದು ಆಸ್ಪತ್ರೆಯ ಉಪಾಧ್ಯಕ್ಷ ಎನ್.ಜಿ. ಭರತೀಶ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.