ಅಂಗಾಂಗ ದಾನ ಮಾಡಿ ಮಾದರಿಯಾದ ಗಾರೆ ಕೆಲಸದ ಕಾರ್ಮಿಕ

ಅಂಗಾಂಗ ದಾನ ಮಾಡಿ ಮಾದರಿಯಾದ ಗಾರೆ ಕೆಲಸದ ಕಾರ್ಮಿಕ
Published on

ಹಾಸನ: ಬಡ ಗಾರೆ ಕೆಲಸ ಮಾಡುವ ಕಾರ್ಮಿಕನೊಬ್ಬ ತನ್ನ ಅಂಗಾಂಗಗಳನ್ನು ದಾನ ಮಾಡಿ,ಸಾವಿನಲ್ಲೂ ಸಾರ್ಥಕತೆ ಮೆರೆಯುವ ಮೂಲಕ ಎಲ್ಲರಿಗೂ ಮಾದರಿ ಆಗಿದ್ದಾರೆ.

ಆಪಘಾತ ಮತ್ತಿತರ ಅವಘಡಗಳಿಗೆ ತುತ್ತಾದವರು ಬದುಕುಳಿಯುವುದು ಕಷ್ಟ ಎಂದು ತಿಳಿದಾಗ ಅವರ ಅಂಗಾಂಗ ದಾನ ಮಾಡುವುದು ಒಳಿತು, ಇದರಿಂದ ಎಷ್ಟೋ ಮಂದಿಗೆ ಹೊಸ ಬಾಳು ಸಿಗಲಿದೆ ಎಂಬ ಅಭಿಪ್ರಾಯ ಇದ್ದರೂ, ಇದಕ್ಕೆ ಕಿವಿಗೊಡುವ ಮಂದಿ ಈಗಲೂ ಕಡಿಮೆ ಇದ್ದಾರೆ.ಅಂಥದ್ದರಲ್ಲಿ ನಗರದ ಗುಂಡೇಗೌಡನ ಕೊಪ್ಪಲು ನಿವಾಸಿ ಮಧು(47)

ಜಿಲ್ಲಾ ಕುರುಹಿನಶೆಟ್ಟಿ ಸಂಘದ ಪ್ರಧಾನ ಕಾರ್ಯದರ್ಶಿ ರಾಮಶೆಟ್ಟಿ ಅವರ ಒಬ್ಬನೇ ಮಗ ಮಧು(47), ಕಳೆದ ನ.22 ರಂದು ರಾಜಘಟ್ಟದಲ್ಲಿ ಗಾರೆ ಮಾಡುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದರು. ಮಧು ಅವರ ತಲೆಗೆ ಪೆಟ್ಟು ಬಿದ್ದು ಮೆದುಳಿಗೂ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು.

ನಿಮ್ಮ ಮಗನಿಗೆ ತುರ್ತಾಗಿ ಆಪರೇಷನ್ ಮಾಡಬೇಕು. ಆದರೆ ಜೀವ ಉಳಿಯುವ ಬಗ್ಗೆ ಗ್ಯಾರಂಟಿ ಕೊಡುವುದಿಲ್ಲ ಎಂದು ವೈದ್ಯರು ಹೇಳಿದರು.ಇದು ಹೆತ್ತ ಕರುಳಿಗೆ ಸಹಜವಾಗಿಯೇ ಆತಂಕಕ್ಕೆ ಕಾರಣವಾಯಿತು. ಆದರೂ ಪ್ರಯತ್ನ ಮಾಡಿ ಎಂದು ಪೋಷಕರು ಮನವಿ ಮಾಡಿದರು. ಆದರೆ ಮಧು ಅವರ ಆರೋಗ್ಯ ಸ್ಥಿತಿ ತೀರಾ ವಿಷಮಿಸಿದ್ದರಿಂದ ವೈದ್ಯರು ಬದುಕಿಸುವುದು ಕಷ್ಟಸಾಧ್ಯ ಬೇಕಾದರೆ ಬೇರೆಡೆಗೆ ಕರೆದುಕೊಂಡು ಹೋಗಿ ಎಂದು ಹೇಳಿದರು.

ನಂತರ ದೇವರಿದ್ದಾನೆ ಎಂದು ಗಟ್ಟಿ ಮನಸ್ಸಿನಿಂದ ಮೈಸೂರಿಗೆ ಅಪೊಲೋ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಈ ನಡುವೆ ಹಾಸನದ ಶ್ರೀರಂಗ ಮೆಡಿಕಲ್ಸ್ ಮಾಲೀಕರು, ನಿಮ್ಮ ನೋವು ನನಗೆ ಅರ್ಥ ಆಗಲಿದೆ, ಎಷ್ಟೇ ಪ್ರಯತ್ನ ಮಾಡಿದರೂ ಮಧು ಬದುಕುವುದು ಕಷ್ಟ ಎಂದು ವೈದ್ಯರೇ ಹೇಳಿದ್ದಾರೆ. ಹಾಗಾಗಿ ಚೆನ್ನಾಗಿರುವ ಆತನ ಅಂಗಾಂಗ ದಾನ ಮಾಡಿ. ಬೇರೆಯವರಿಗಾದರೂ ಉಪಯೋಗ ಆಗಲಿ ಎಂದು ಸಲಹೆ ನೀಡಿದರು.

ಇದಕ್ಕೆ ಭಾರವಾದ ಮನಸ್ಸಿನಿಂದಲೇ ಒಪ್ಪಿದ ಮಧು ಅವರ ತಂದೆ ರಾಮಶೆಟ್ಟಿ, ಪತ್ನಿ ಇತರರು, ಮಧು ಅವರ ಅಂಗಾಂಗ ದಾನ ಮಾಡಲು ನಿರ್ಧರಿಸಿದರು. ಕಳೆದ ಮಂಗಳವಾರ(ನ.26) ರಂದು ಮಧು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಬಳಿಕ ಮಗನ ಅಂಗಾಂಗ ದಾನ ಮಾಡುವ ನಿರ್ಧಾರವನ್ನು ರಾಮಶೆಟ್ಟಿ ಅವರು ಅಪೊಲೋ ಆಸ್ಪತ್ರೆಯ ವೈದ್ಯರಿಗೆ ತಿಳಿಸಿದರು. ಅದರಂತೆ ಮಧು ಅವರ ಹೃದಯ, ಕಿಡ್ನಿ, ಕಣ್ಣು, ಲಿವರ್ ಮತ್ತು ಚರ್ಮವನ್ನು ಆಸ್ಪತ್ರೆಯ ವೈದ್ಯರು ಪಡೆದುಕೊಂಡು ಬೇರೊಬ್ಬರಿಗೆ ಅಳವಡಿಸಿದರು. ಇದರಿಂದ ಮಧು ಹೊಟ್ಟೆಪಾಡಿಗಾಗಿ ಕೆಲಸ ಮಾಡುವಾಗಲೇ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡು ಪ್ರಾಣ ಕಳೆದುಕೊಂಡರೂ, ಸತ್ತ ನಂತರ ತನ್ನ ಅಮೂಲ್ಯ ಐದು ಅಂಗಗಳನ್ನು ದಾನ ಮಾಡುವ ಮೂಲಕ ನಿಜಕ್ಕೂ ಮಾನವೀಯತೆ ಮೆರೆದಿದ್ದಾರೆ.

ಇದಕ್ಕೆ ಕಾರಣರಾದ ಮಧು ಅವರ ಪೋಷಕರ ನಡೆಗೆ ಅಪಾರ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಪೊಲೋ ಆಸ್ಪತ್ರೆಯ ವೈದ್ಯರು ಹಾಗೂ ಇಡೀ ಸಿಬ್ಬಂದಿ ಕೈಮುಗಿದು ಮಧು ಅವರ ಮೃತದೇಹಕ್ಕೆ ಅಂತಿಮ ಗೌರವ ವಂದನೆ ಸಲ್ಲಿಸಿದರು.

ಈ ಕುರಿತು ಮಾತನಾಡಿದ ರಾಮಶೆಟ್ಟಿ, ನನಗೆ ಮೂವರು ಹೆಣ್ಣು ಮಕ್ಕಳು. ಮಧು ಒಬ್ಬನೇ ಮಗ. ಮದುವೆ ಆಗಿ 12 ವರ್ಷ ಆಗಿತ್ತು. ಆದರೆ ಮಕ್ಕಳು ಇರಲಿಲ್ಲ. ಇದ್ದ ಒಬ್ಬನೇ ಮಗ ಈಗ ಇಲ್ಲ ಎಂಬ ನೋವು ಮತ್ತೆ ಮತ್ತೆ ಕಾಡುತ್ತಿದೆ. ಆದರೆ ಬೆಂಕಿಯಲ್ಲಿ ಸುಟ್ಟುಹೋಗುತ್ತಿದ್ದ ಅಂಗಾಂಗಗಳನ್ನು ಬೇರೊಬ್ಬರಿಗೆ ದಾನ ಮಾಡಿದ್ದು, ನೋವಿನಲ್ಲೂ ಖುಷಿ ತರಿಸಿದೆ ಎಂದು ಗದ್ಗದಿತರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net