ಅಂಗಾಂಗ ದಾನ ಮಹತ್ವದ ಕಾರ್ಯ

21Manju9
ನಗರದಲ್ಲಿ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯಕೀಯ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಭಾನುವಾರ ಅಂಗಾಂಗ ದಾನ ಜಾಗೃತಿ ಜಾಥಾ ಜರುಗಿತು.
Published on

ಬೆಳಗಾವಿ: ವೈದ್ಯ ವಿಜ್ಞಾನ ಮುಂದುವರಿದಂತೆ ಅನೇಕ ಸೌಲಭ್ಯಗಳು ಲಭಿಸುತ್ತಿದ್ದು, ಜನರನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದೆ. ಅದರಲ್ಲಿ ಅಂಗಾಂಗ ದಾನವು ವೈದ್ಯಕೀಯ ಅದ್ಭುತಗಳಲ್ಲಿ ಒಂದು ಎಂದು ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯ ಡಾ.ರಿಚರ್ಡ್ ಸಾಲ್ಡಾನಾ ಹೇಳಿದರು.

ನಗರದಲ್ಲಿ ಭಾನುವಾರ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ, ಚೆನ್ನೈನ ಮೋಹನ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಜರುಗಿದ ಅಂಗಾಂಗ ದಾನಗಳ ಜಾಗೃತಿ ಜಾಥಾದಲ್ಲಿ ಮಾತನಾಡಿದ ಅವರು, ಅತ್ಯಾಧುನಿಕ ಸೌಲಭ್ಯ ಹೊಂದಿರುವ ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯು ಅಂಗಾಂಗಗಳ ಕಸಿ ಮಾಡುವಲ್ಲಿ ಈ ಭಾಗದಲ್ಲಿ ಮುಂಚೂಣಿಯಲ್ಲಿದೆ. ಕೇವಲ 18 ದಿನಗಳಲ್ಲಿ 3 ಹೃದಯ ಕಸಿ ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದರು.
ಅಂಗಾಂಗ ದಾನವು ಭಾರತದಲ್ಲಿ ಅತ್ಯವಶ್ಯವಾಗಿದ್ದು, ಇನ್ನೂ ಆ ವೇಗವನ್ನು ಪಡೆದುಕೊಂಡಿಲ್ಲ. ಆದರೆ, ಅನೇಕ ದೇಶಗಳಲ್ಲಿ ಸ್ವಯಂಪ್ರೇರಿತರಾಗಿ ಅಂಗಾಂಗ ದಾನ ಮಾಡಲು ಜನ ಮುಂದೆ ಬರುತ್ತಾರೆ. ಆದ್ದರಿಂದ ಭಾರತೀಯರು ಜೀವ ಉಳಿಸುವ ಈ ಮಹೋನ್ನತ ಕಾರ್ಯದಲ್ಲಿ ಅಂಗಾಂಗಗಳ ದಾನ ಮಾಡಲು ಸ್ವಯಂ ಪ್ರೇರಿತವಾಗಿ ಮುಂದೆ ಬರಬೇಕು. ಅದಕ್ಕಾಗಿ ಸಂಘ-ಸಂಸ್ಥೆಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸದಾ ಕಾರ್ಯಮಗ್ನವಾಗಿರಬೇಕು. ಮರಣಾನಂತರ ಅಂಗಾಂಗಗಳನ್ನು ಇನ್ನೊಬ್ಬರ ಜೀವ ಉಳಿಸಲು ದಾನವಾಗಿ ನೀಡಬೇಕು ಎಂದರು.

ಕ್ರೀಡಾಪಟು ಮಯೂರಾ ಶಿವಾಳ್ಕರ ಅವರು ಜಾಥಾಗೆ ಚಾಲನೆ ನೀಡಿದರು. ಆರ್‌ಪಿಡಿ ವೃತ್ತದಿಂದ ಹೊರಟ ಜಾಥಾವು ಬಸವೇಶ್ವರ ವೃತ್ತ, ಗೋಗಟೆ ವೃತ್ತ, ಮೀನು ಮಾರುಕಟ್ಟೆ, ಛತ್ರಪತಿ ಸಂಭಾಜಿ ವೃತ್ತ, ಕಾಲೇಜು ರಸ್ತೆ, ಚನ್ನಮ್ಮ ವೃತ್ತ , ಶ್ರೀಕೃಷ್ಣ ದೇವರಾಯ ವೃತ್ತದ ಮೂಲಕ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರವರೆಗೆ ಸಾಗಿತು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ.ಜಾಲಿ, ಡಾ. ಮಹಾಂತೇಶ ರಾಮಣ್ಣವರ, ಮಾಜಿ ಮೇಯರ್ ವಿಜಯ ಮೋರೆ, ಅಭಿಮನ್ಯು ಡಾಗಾ, ಟ್ರಾಫಿಕ್ ಪೊಲೀಸ್ ಅಧಿಕಾರಿ ಬಸವರಾಜ ಡೋಣಿ, ಶಂಕರ ಪರಸಣ್ಣವರ, ಪ್ರಮೋದ ಸುಳಿಕೇರಿ, ವಿನೋದ ದೇಶನೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net