

ಕಲಬುರಗಿ: ನಗರದಲ್ಲಿ ಇತ್ತೀಚೆಗೆ ಜಿಲ್ಲೆಯ ೧೮೦ ವಿಕಲಚೇತನರಿಗೆ ವಿತರಿಸಿದ ದ್ವಿಚಕ್ರ ವಾಹನವೊಂದರಲ್ಲಿ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡು ಫಲಾನುಭವಿ ಅನ್ನಿಬಾಯಿ, ಪಾಟೀಲ್ ನಾಯಕ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದಕ್ಕೆ ಹಾಳಾದ ವಾಹನಗಳ ವಿತರಣೆಯೇ ಕಾರಣ ಎಂದು ನವ ಕರ್ನಾಟಕ ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದ ಅಧ್ಯಕ್ಷ ಡಾ.ಅಂಬಾಜಿ ಮೇಟಿ ತಿಳಿಸಿದರು.
ಡಿಸಿಎಂ ಡಿ.ಕೆ.ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಅವರ ನೇತೃತ್ವದಲ್ಲಿ ವಿತರಿಸಿದ ಮೂರುಗಂಟೆಯಲ್ಲಿ ಘಟನೆ ಸಂಭವಿಸಿದೆ. ಹಲವಾರು ತಿಂಗಳು ಬೈಕ್‌ಗಳನ್ನು ಮಳೆ, ಬಿಸಿಲಿನಲ್ಲಿ ಇಡಲಾಗಿದೆ. ಇದರಿಂದ ಬೈಕ್‌ಗಳು ಹಾಳಾಗಿದ್ದು, ಅನಾಹುತಕ್ಕೆ ಕಾರಣ. ಬಹುತೇಕ ಬೈಕ್‌ಗಳು ಹಾಳಾಗಿ ವಿವಿಧ ದೋಷ ಕಂಡಿವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಬೈಕ್‌ಗಳ ಗುಣಮಟ್ಟದ ತಪಾಸಣೆ, ತನಿಖೆ ನಡೆಸಬೇಕು. ಗಂಭೀರವಾಗಿ ಗಾಯಗೊಂಡ ಗ್ರಾಮೀಣ ಪುನರ್ವಸತಿ ಗೌರವಧನ ಕಾರ್ಯಕರ್ತ ಪಾಟೀಲ್ ನಾಯಕ್ ಮತ್ತು ಸಹೋದರಿ ಅನ್ನಿಬಾಯಿ ನಾಯಕ ಅವರ ಚಿಕಿತ್ಸಾ ವೆಚ್ಚ ಅಧಿಕಾರಿಗಳು ಭರಿಸಬೇಕು. ಇದುವರೆಗೆ ಸೌಜನ್ಯಕ್ಕೂ ಅಧಿಕಾರಿಗಳು ಭೇಟಿ ನೀಡದೆ ನಿರ್ಲಕ್ಷಿಸಿದ್ದಾರೆ. ಇನ್ನು ಅದೇ ಕಾರ್ಯಕ್ರಮದಲ್ಲಿ ೨೦೧೮ರಲ್ಲಿ ಬೈಕ್ ಪಡೆದ ಅಂಗವಿಕಲರಿಗೆ ಪುನಃ ನೀಡಿದ್ದು, ಅಕ್ರಮ ನಡೆಸಿರುವ ಅನುಮಾನ ಮೂಡಿಸಿದೆ ಎಂದು ಹೇಳಿದರು.
ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಳಿ ನಿಯೋಗ ಕೊಂಡ್ಯೊಯ್ಯಲಾಗುವುದು ಎಂದು ಹೇಳಿದರು. ತುಳಸಿರಾಂ ಹಿರೋಳಿ ಇತರರಿದ್ದರು.