ಅಂಗವಿಕಲರಿಗೆ ಅವಕಾಶ ನೀಡಿ: ಶಾಸಕ ಜಿ.ಟಿ.ದೇವೇಗೌಡ

mysore
Published on

ಮೈಸೂರು: ಅಂಗವಿಕಲರಿಗೆ ಅನುಕಂಪ, ಮಾನವೀಯತೆ ತೋರಿ ಸುಮ್ಮನಾಗುವ ಬದಲಿಗೆ ಪ್ರೋತ್ಸಾಹ ಮತ್ತು ಅವಕಾಶ ನೀಡಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಹೂಟಗಳ್ಳಿ ನಗರಸಭೆ ವತಿಯಿಂದ ಸೋಮವಾರ ಅಂಗವಿಕಲರಿಗೆ ವ್ಹೀಲ್‌ಚೇರ್, ತ್ರಿಚಕ್ರವಾಹನ, ಹಿಯರಿಂಗ್ ಹೆಡ್, ಮಹಿಳೆಯರಿಗೆ ಹೊಲಿಗೆ ಯಂತ್ರ, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರಮಪಟ್ಟು ಶಿಕ್ಷಣ ಪಡೆದರೆ ಹಲವಾರು ಉದ್ಯೋಗ ದೊರೆಯಲಿವೆ. ಜತೆಗೆ ಸರ್ಕಾರದ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಅಂಗವಿಕಲರು ಶಿಕ್ಷಣ ಪಡೆದು ಸರ್ಕಾರಿ ಉದ್ಯೋಗ ಪಡೆದಿದ್ದಾರೆ. ಅಂಗವೈಕಲ್ಯತೆಯನ್ನು ಮೆಟ್ಟಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಅಂಗವಿಕಲರಿಗೆ ಸಾಮಾನ್ಯರಂತೆ ಅವಕಾಶ ನೀಡಿದರೆ ಮುಂದೆ ಬರುತ್ತಾರೆ. ಸಮಾಜದಲ್ಲಿ ಎಲ್ಲರಂತೆ ಬದುಕಲು ದಾರಿಯಾಗಲಿದೆ ಎಂದು ಹೇಳಿದರು.

ಸರ್ಕಾರ ಹಲವಾರು ಸವಲತ್ತು ನೀಡಿದರೂ ಸರಿಯಾಗಿ ಫಲಾನುಭವಿಗಳಿಗೆ ದೊರಕುತ್ತಿರಲಿಲ್ಲ. ಆದರೆ ಈಗ ಅರಿವು ಮೂಡಿರುವುದರಿಂದ ಸ್ವಯಂಪ್ರೇರಣೆಯಿಂದ ತ್ರಿಚಕ್ರವಾಹನ, ವಿದ್ಯುತ್ ಚಾಲಿತ ವ್ಹೀಲ್‌ಚೇರ್ ಪಡೆಯುತ್ತಿದ್ದಾರೆ ಎಂದರು.

ಬಡ ಮಕ್ಕಳು ಉನ್ನತ ವ್ಯಾಸಂಗ ಪಡೆದು ಸರ್ಕಾರಿ, ಖಾಸಗಿ ಕಂಪನಿಗಳಲ್ಲಿ ಸೇವೆಗೆ ಸೇರಿದ ಮೇಲೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. ಬಡ ಮಕ್ಕಳ ನೆರವಿಗೆ ಕೈಲಾದಷ್ಟು ನೆರವು ನೀಡಿದರೆ ಸಮಾಜದಲ್ಲಿ ಸಮಾನತೆ ಬರಲು ಸಾಧ್ಯವಾಗಲಿದೆ ಎಂದು ಹೇಳಿದರು.

ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಿ ಯಂತ್ರ ನೀಡಲಾಗುತ್ತಿದೆ ಮಹಿಳೆಯರು ಸ್ವಯಂ ಉದ್ಯೋಗ ಪಡೆದುಕೊಂಡು ಕುಟುಂಬ ನಿರ್ವಹಣೆ ಮತ್ತು ಆರ್ಥಿಕವಾಗಿ ಸಬಲರಾಗಬೇಕು. ಟೈಲರಿಂಗ್‌ಗೆ ಬೇಡಿಕೆ ಇದೆ. ಗಾಮೆರ್ಂಟ್ಸ್‌ಗಳು ಹೆಚ್ಚಾಗಿರುವುದರಿಂದ ಮನೆಯಲ್ಲಿ ಬಟ್ಟೆ ಹೊಲಿದು ಕೊಡಬಹುದಾಗಿದೆ ಎಂದು ನುಡಿದರು.

ವಸತಿ ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ 3 ಲಕ್ಷ ರೂ. ಪ್ರೋತ್ಸಾಹಧನದ ಚೆಕ್ ನೀಡಲಾಗಿದೆ. ಬಡವರು ಮನೆ ಕಟ್ಟಿಕೊಳ್ಳುವುದು ದುಸ್ತರವಾಗಿರುವ ಕಾರಣ ಸರ್ಕಾರ ಸ್ಥಳೀಯ ಸಂಸ್ಥೆಗಳಲ್ಲಿ ಆಯ್ಕೆಯಾಗುವ ಫಲಾನುಭವಿಗಳ ಪ್ರೋತ್ಸಾಹಧನ ಹೆಚ್ಚಳ ಮಾಡಲಾಗಿದೆ ಎಂದರು. ಹೂಟಗಳ್ಳಿ ನಗರಸಭೆ ಪೌರಾಯುಕ್ತ ಚಂದ್ರಶೇಖರ್, ಎಇಇ ಮಧು, ಮುಖಂಡರಾದ ಸುರೇಶ್, ರಾಮು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net