

ಚಿತ್ರದುರ್ಗ: ಅಂಗವಿಕಲರಿಗೆ ಅನುಕಂಪ ತೋರಿಸುವುದಕ್ಕಿಂತ ಮುಖ್ಯವಾಗಿ ನಾವು ಅವರಿಗೆ ಶಿಕ್ಷಣ,ಉದ್ಯೋಗದಲ್ಲಿ ಅವಕಾಶವನ್ನು ಕಲ್ಪಿಸಿ ಕೊಡಬೇಕಿದೆ ಎಂದು ಎಡಿಸಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.
ಜಿಲ್ಲಾಡಳಿತ, ಜಿಪಂ, ವಿವಿಧ ಸಂಘ ಸಂಸ್ಥೆಗಳು ಹಾಗೂ ವಿವಿಧೋದ್ದೇಶ ನಗರ, ಗ್ರಾಮೀಣ ಪುನರ್ವಸತಿ ಕಾರ‌್ಯಕರ್ತರ ಸಂಯುಕ್ತಾಶ್ರಯದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಉತ್ತಮ ಅವಕಾಶಗಳನ್ನು ಒದಗಿಸಿದರೆ ಅಂಗವಿಕಲರು ಸಹ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗಲಿದೆ. ಸಮಗ್ರ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ವಿಕಲಚೇತನ ವ್ಯಕ್ತಿಗಳಲ್ಲಿ ನಾಯಕತ್ವಕ್ಕೆ ಉತ್ತೇಜನ ಎಂಬ ಘೋಷ ವಾಕ್ಯದೊಂದಿಗೆ ಈ ಬಾರಿ ವಿಶ್ವ ಅಂಗವಿಕಲರ ದಿನ ಆಚರಿಸಲಾಗುತ್ತಿದೆ ಎಂದರು.
ಅವಕಾಶಗಳಿಂದ ಅವರನ್ನು ವಂಚಿತರನ್ನಾಗಿ ಮಾಡ ಬಾರದು. ಯಾವುದೇ ಕಾರಣಕ್ಕೂ ಅಂಗವಿಕಲರು ಎದೆಗುಂದಬಾರದು. ಉತ್ಸಾಹ, ಛಲ, ಧೈರ್ಯ, ಕಠಿಣ ಪರಿಶ್ರಮವಿದ್ದರೆ ಸಾಧನೆ ಸಾಧ್ಯ. ಪ್ಯಾರಾ ಒಲಂಪಿಕ್, ಕ್ರೀಡೆ ಸಹಿತ ವಿವಿಧ ಕ್ಷೇತ್ರಗಳಲ್ಲಿ ಅವರ ಸಾಧನೆ ಗಮನ ಸೆಳೆದಿದ್ದು, ಮುಖ್ಯವಾಹಿನಿಗೆ ತರಲು ಸರ್ಕಾರಗಳು ಮೀಸಲಾತಿ ಸೌಲಭ್ಯ ಕಲ್ಪಿಸಿವೆ ಎಂದರು.
ಕುಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ,ಕೀಳರಿಮೆ ತೊರೆದು, ನಾವು ಯಾರಿಗೂ ಕಮ್ಮಿ ಇಲ್ಲ ಎಂಬ ದೃಢ ಭಾವನೆಯನ್ನು ಬೆಳೆಸಿಕೊಳ್ಳ ಬೇಕೆಂದರು. ನಗರಸಭೆ ಅಧ್ಯಕ್ಷೆ ಬಿ.ಎನ್.ಸುಮಿತಾರಾಘವೇಂದ್ರ ಮಾತನಾಡಿ,ಮನೋಸ್ಥೈರ್ಯದೊಂದಿಗೆ ಉನ್ನತ ಗುರಿ ಸಾಧಿಸುವಂತೆ ಅಂಗವಿಕಲರಿಗೆ ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಆರ್. ಬಣಕಾರ್ ಮಾತನಾಡಿ, ಅಂಗವಿಕಲರು ಕ್ರೀಡಾ ಮತ್ತು ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ಎಲ್ಲ ಕ್ಷೇತ್ರಗಳಲ್ಲಿಯೂ ವಿಶೇಷವಾದ ಸಾಧನೆ ತೋರಿದ್ದಾರೆ ಎಂದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ. ವೈಶಾಲಿ ಮಾತನಾಡಿ, 2011ರ ಜನಗಣತಿಯಂತೆ ಜಿಲ್ಲೆಯಲ್ಲಿ 35,971 ಅಂಗವಿಕಲರು ಇದ್ದಾರೆ. ಇವರಿಗೆ ಸರ್ಕಾರ ಒದಗಿಸಿರುವ ಸೌಲಭ್ಯಗಳ ಕುರಿತು ವಿವರಿಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾದ ಅಂಗವಿಕಲ ವಿದ್ಯಾರ್ಥಿಗಳು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿ ಇ. ಶ್ರೀಹರಿ ಅವರನ್ನು ಗೌರವಿಸಲಾಯಿತು. ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಂಗವಿಕಲ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ,ಡಿವೈಎಸ್‌ಪಿ ಪಿ.ಕೆ.ದಿನಕರ್, ಅಂಗವಿಕಲ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್. ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಪವಿತ್ರಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ ಮತ್ತಿತರರು ಇದ್ದರು.