ಅಂಗವಿಕಲರಿಂದ ಪ್ರತಿಭಟನೆ

12
Published on

ಮೈಸೂರು: ಅಂಗವಿಕಲರಿಗೆ ಆಗುತ್ತಿರುವ ತೊಂದರೆ ಸರಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗವಿಕಲರ ವೇದಿಕೆಯಿಂದ ಬುಧವಾರ ನಗರಪಾಲಿಕೆ ಮುಂದೆ ಪ್ರತಿಭಟನೆ ನಡೆಯಿತು.
ಪಾಲಿಕೆಯಲ್ಲಿ ಅಂಗವಿಕಲರಿಗೆ ಮೀಸಲಾದ ಶೇ.5ರಷ್ಟು ಅನುದಾನ ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತಿಲ್ಲ. ಈ ಬಗ್ಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಅಂಗವಿಕಲರ ಶೇ.5ರಷ್ಟು ಅನುದಾನದ ವಿಭಾಗವು ನಗರಪಾಲಿಕೆಯ ಹೊಸ ಕಟ್ಟಡದ ಮೊದಲನೇ ಮಹಡಿಯಲ್ಲಿದೆ. ಅದನ್ನು ಕೂಡಲೇ ನೆಲಮಹಡಿಗೆ ಸ್ಥಳಾಂತರಿಸಿದರೆ ಅನುಕೂಲವಾಗುತ್ತದೆ. ಅನುದಾನದಲ್ಲಿ ಒಬ್ಬ ಅಂಗವಿಕಲನಿಗೆ ಒಂದೇ ಬಾರಿ ಅನುದಾನ ಎಂದು ಅಧಿಕಾರಿಗಳು ಹಿಂಬರಹ ನೀಡುತ್ತಿದ್ದು, ಅನುದಾನ ಬಳಕೆಯ ಬಗ್ಗೆ ತರಬೇತಿ ನೀಡುವುದು, ಅಂಗವಿಕಲರ ಜತೆ ಸಂಯಮವಾಗಿ ವರ್ತಿಸುವಂತೆ ಮಾರ್ಗದರ್ಶನ ನೀಡಬೇಕು ಎಂದು ಆಗ್ರಹಿಸಿದರು.
ನಗರಪಾಲಿಕೆಯಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆದು ಅಂಗವಿಕಲರು ನಡೆಸುತ್ತಿರುವ ಪೆಟ್ಟಿ ಅಂಗಡಿಗಳಿಗೆ ಕೆಲವು ಅಧಿಕಾರಿಗಳು ಯಾವುದೇ ಕಾರಣ ಇಲ್ಲದೆಯೇ ತೊಂದರೆ ನೀಡುತ್ತಿದ್ದಾರೆ. ಇವರಿಗೆ ಅಂಗವಿಕಲರೊಂದಿಗೆ ಮಾನವೀಯತೆಯಿಂದ ವರ್ತಿಸಲು ತಿಳಿಹೇಳಬೇಕು ಎಂದು ಒತ್ತಾಯಿಸಿದರು
ನಗರಪಾಲಿಕೆಯಲ್ಲಿ ಕ್ಷೇತ್ರವಾರು ಆಶ್ರಯ ಮನೆಗಳಿಗೆ ಅರ್ಜಿ ಕರೆಯುತ್ತಿದ್ದು, ನಿಜವಾದ ಅಂಗವಿಕಲ ಫಲಾನುಭವಿಗಳಿಗೆ ಮನೆ ಸಿಗದೆ ಅನ್ಯಾಯವಾಗಿದೆ. ಆದ್ದರಿಂದ ಯಾವುದಾದರೂ ಯೋಜನೆಯಲ್ಲಿ ಅಂಗವಿಕಲರಿಗೆ ಪ್ರತ್ಯೇಕ ಕಾಲನಿ ನಿರ್ಮಾಣದ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಮನೆಗಳ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಕೋರಿದರು.
ನಗರಪಾಲಿಕೆ ಹಾಗೂ ವಲಯ ಕಚೇರಿಗಳಲ್ಲಿ ಶೇ.5 ಅನುದಾನದಲ್ಲಿ ಅಂಗವಿಕಲರಿಗೆ ಸಿಗುವ ಸವಲತ್ತುಗಳ ಮಾಹಿತಿಯುಳ್ಳ ಫಲಕವನ್ನು ಅಳವಡಿಸಬೇಕು. ಬ್ಯಾಟರಿ ವಾಹನಗಳಿಗೆ ಟೆಂಡರ್ ಕರೆದಿದ್ದು, ಇದನ್ನು ರದ್ದುಪಡಿಸಿ ಪೆಟ್ರೋಲ್ ಮಾದರಿ ವಾಹನವನ್ನು ನೀಡಬೇಕು ಎಂದು ಹೇಳಿದರು.
ಅಧ್ಯಕ್ಷ ಎಂ. ಪ್ರಭುಸ್ವಾಮಿ, ಕಾರ್ಯದರ್ಶಿ ದಿಲೀಪ್ ಕುಮಾರ್, ಮುಖಂಡರಾದ ಮಹದೇವಮ್ಮ, ವಸಂತಲಕ್ಷ್ಮಿ, ಸುನೀಲ್, ಚೌಡಯ್ಯ, ನಾಗರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net