ಅಂಗವಿಕಲರ ಸಮಾನತೆ, ಸಂರಕ್ಷಣೆ, ಸಶಕ್ತೀಕರಣ ಅಭಿಯಾನಕ್ಕೆ ಚಾಲನೆ

Published on

ಮೈಸೂರು: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಕೈಗೊಂಡಿರುವ ಅಂಗವಿಕಲರ ಸಮಾನತೆ, ಸಂರಕ್ಷಣೆ, ಸಶಕ್ತೀಕರಣ ಅಭಿಯಾನಕ್ಕೆ ಭಾನುವಾರ ರಾತ್ರಿ ಚಾಲನೆ ದೊರೆಯಿತು.
ರಾಜ್ಯದ 31 ಜಿಲ್ಲೆಗಳ ಪೈಕಿ 21 ಜಿಲ್ಲೆಗಳಲ್ಲಿ ಈ ಅಭಿಯಾನ ಸಂಚಾರ ಮಾಡಿ ಅಂದಾಜು 38 ಸಾವಿರ ಅಂಗವಿಕಲರ ಭೇಟಿ ಮಾಡಿ ಅರಿವು, ಆತ್ಮವಿಶ್ವಾಸ ಮೂಡಿಸಲಿದೆ.

ಯಾದವಗಿರಿಯಲ್ಲಿರುವ ಈಶ್ವರೀ ವಿಶ್ವವಿದ್ಯಾಲಯದ ಜ್ಞಾನಪ್ರಕಾಶ ಭವನದಲ್ಲಿ ಅಭಿಯಾನಕ್ಕೆ ಮಾಜಿ ಶಾಸಕ ವಾಸು ಚಾಲನೆ ನೀಡಿ ಶುಭ ಹಾರೈಸಿದರು.

ಅಬುಪರ್ವದ ಬ್ರಹ್ಮಕುಮಾರಿ ಸಂಸ್ಥೆಯ ಅಂಗವಿಕಲ ವಿಭಾಗದ ರಾಷ್ಟ್ರೀಯ ಸಂಚಾಲಕ ರಾಜಯೋಗಿ ಬಿ.ಕೆ.ಸೂರ್ಯಮಣಿ ಭಾಯೀಜಿ ಮಾತನಾಡಿ, ಅಂಗವಿಕಲರಿಗೆ ಆಹಾರ, ಅನುದಾನ, ಆರ್ಥಿಕ ನೆರವು, ವಿವಿಧ ಸೌಲಭ್ಯ ನೀಡುವುದೇ ಇದೀಗ ಸೇವೆ ಎಂಬ ಪರಿಭಾಷೆ ಬಂದಿದೆ. ಇದು ವ್ಯಕ್ತಿಯ ಶರೀರಕ್ಕೆ ಅರ್ಪಿಸುವ ಸೇವೆಯಾಗಿದೆ. ಕೆಲ ದಿನಗಳಲ್ಲೇ ಈ ಎಲ್ಲ ಸೌಲಭ್ಯ ಮುಗಿದು ಹೋಗಲಿದೆ. ಹೀಗಾಗಿ, ಇದು ಸಾಕಾಗುವುದಿಲ್ಲ. ಅಂಗವಿಕಲರಿಗೆ ಇದಕ್ಕಿಂತ ಮನೋಬಲ, ಆತ್ಮಸ್ಥೈರ್ಯ, ಮಾನಸಿಕ ಸಶಕ್ತಿ ಮತ್ತು ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಅನುಕೂಲ ಕಲ್ಪಿಸಿಕೊಡಬೇಕಿದೆ ಎಂದರು.

ಅಂಗವಿಕಲರು ಅನುಕಂಪವನ್ನು ಬಯಸುವುದಿಲ್ಲ. ಹೀಗಾಗಿ, ಅವರನ್ನು ಸ್ವಾವಲಂಬನೆ ಜೀವನ ಸಾಗಿಸಲು ಆತ್ಮನಿರ್ಭರ್ ಮಾಡಬೇಕಿದೆ. ಇದುವೇ ನಿಜವಾದ ಸೇವೆ. ಈ ನಿಟ್ಟಿನಲ್ಲಿ ಸಮಾಜ, ಸರ್ಕಾರ ಯೋಚನೆ ಮಾಡಿ ಕಾರ್ಯೋನ್ಮುಖವಾಗಬೇಕಿದೆ ಎಂದರು.
ಸಾಮಾನ್ಯರಿಗಿಂತ ಅಂಗವಿಕಲರು ಬಹಳ ವಿಶೇಷರು, ವಿಶಿಷ್ಟರು. ಅವರಲ್ಲಿ ವಿಶೇಷ ಗುಣ, ಶಕ್ತಿ ಮತ್ತು ಕೌಶಲ ಇರುತ್ತದೆ. ಅದು ಸಾಮಾನ್ಯರಲ್ಲಿ ಕಾಣಸಿಗುವುದಿಲ್ಲ. ಆದ್ದರಿಂದ ಆ ರೀತಿ ವಿಶೇಷ ಗುಣಗಳಿಂದ ಸಾಮಾನ್ಯರಿಗಿಂತ ಉತ್ತಮವಾಗಿ ಸ್ವಾವಲಂಬನೆಯಾಗಿ ಬದುಕು ಸಾಗಿಸುವುದು ಕಾಣಸಿಗುತ್ತದೆ ಎಂದರು.

ಪ್ರತಿಯೊಬ್ಬ ಸಾಮಾನ್ಯರಲ್ಲೂ ಒಂದೊಂದು ಶಕ್ತಿ ಇರುತ್ತದೆ. ಅದನ್ನು ಸದ್ಬಳಕೆ ಮಾಡಿಕೊಳ್ಳುವುದಿಲ್ಲ. ಬದಲಿಗೆ ದುರ್ಬಳಕೆ ಮಾಡಿಕೊಂಡ ಉದಾಹರಣೆಯೇ ಬಹಳಷ್ಟು ದೊರೆಯುತ್ತದೆ. ಇದು ಶಕ್ತಿಯನ್ನು ಪೋಲು ಮಾಡುವ ಮೂಲಕ ಅಪಮೌಲ್ಯ ಮಾಡಲಾಗುತ್ತಿದೆ. ಇದು ಸರಿಯಲ್ಲ. ಸಮಾಜ ಸುಧಾರಣೆ, ಮನುಕುಲದ ಉದ್ಧಾರಕ್ಕೆ ಪ್ರತಿಯೊಬ್ಬರ ಶಕ್ತಿ, ಸಾಮರ್ಥ್ಯ ಬಳಕೆ ಆಗಬೇಕು ಎಂದರು.
ಜಿಲ್ಲಾ ಪಂಚಾಯಿತಿ ಪಂಚಾಯತ್ ರಾಜ್ ಕಾರ್ಯಪಾಲಕ ಇಂಜಿನಿಯರ್ ಆರ್.ರಮೇಶ್, ಈಶ್ವರೀಯ ವಿಶ್ವವಿದ್ಯಾಲಯದ ಮೈಸೂರು ಉಪವಲಯದ ಮುಖ್ಯ ಸಂಚಾಲಕಿ ರಾಜಯೋಗಿನಿ ಬಿ.ಕೆ.ಲಕ್ಷ್ಮೀಜಿ, ತಿಲಕನಗರದ ಅಂಧರ ಸರ್ಕಾರಿ ಶಾಲೆಯ ಅಧೀಕ್ಷ ಸತೀಶ್ ಇನ್ನಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net