ಅಂಗವಿಕಲರ ಕೈ ಹಿಡಿದ ಪಿಎಂ ಮೋದಿ

15
Published on

ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿಕೆ, ವಿಕಲಾಂಗರಿಗೆ ಸಲಕರಣೆ ವಿತರಣೆ

ತುರುವೇಕೆರೆ: ದೇಶದಲ್ಲಿನ ಅಂಗವಿಕಲರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಶೇಷವಾಗಿ ಗುರುತಿಸಿ ಸವಲತ್ತು ನೀಡಿದ್ದಾರೆ ಎಂದು ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದರು. ಪಟ್ಟಣದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಶುಕ್ರವಾರ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ವಿಶೇಷ ಅಡಿಪ್​ ಯೋಜನೆಯಡಿ ಅಂಗವಿಕಲರಿಗೆ ಉಚಿತ ಸಾಧನ ಸಲಕರಣೆ ಸಮರ್ಪಣೆ ಹಾಗೂ ಸಾರ್ವಜನಿಕ ಕುಂದು&ಕೊರತೆ ಸಭೆಯಲ್ಲಿ ಸಲಕರಣೆ ವಿತರಿಸಿ ಮಾತನಾಡಿದರು.

ರಾಷ್ಟ್ರದಲ್ಲಿ 8 ಕೋಟಿ ಕುಟುಂಬಗಳಲ್ಲಿ ಅಂಗವಿಕಲರು ಇದ್ದು, ಅವರನ್ನು ಕೇಂದ್ರ ಸರ್ಕಾರ ಗುರುತಿಸಿ, ಸರ್ಕಾರದ ಸವಲತ್ತು ನೀಡುತ್ತಿದೆ. ಜಿಲ್ಲೆಯಲ್ಲಿ 1500 ಕುಟುಂಬದಲ್ಲಿ ಅಂಗವಿಕಲರಿದ್ದು, ಇಂದು ತಾಲೂಕಿನ 321 ಅಂಗವಿಕಲರಿಗೆ ಉಚಿತ ಸಲಕರಣೆ ನೀಡಲಾಗುತ್ತಿದೆ ಎಂದರು.

ತುರುವೇಕೆರೆ ಮರೆಯಲು ಸಾಧ್ಯವಿಲ್ಲ: ತುರುವೇಕೆರೆ ಕ್ಷೇತ್ರವನ್ನು ನನ್ನ ಕೊನೆಯ ಉಸಿರು ಇರುವ ತನಕ ಮರೆಯಲು ಸಾಧ್ಯವಿಲ್ಲ. ಲೋಕಸಭಾ ಚುನಾವಣೆಯಲ್ಲಿ 50 ಸಾವಿರ ಲೀಡ್​ ಕೊಟ್ಟ ಈ ಜನತೆಯ ಋಣ ತಿರಿಸುವ ಕೆಲಸ ಮಾಡುತ್ತಿದ್ದೇನೆ. ಹಲವು ರೈಲುಗಳನ್ನು ನಿಲ್ಲಿಸುವಂತೆ ಮಾಡಿದ್ದು, ಮುಂದಿನ ದಿನಗಳಲ್ಲಿ ತಿಪಟೂರಿನಿಂದ ಬೆಂಗಳೂರುವರೆಗೂ ಮೆಮು ರೈಲು ಪ್ರಾರಂಭಿಸಲಾಗುವುದು. ಬಾಣಸಂದ್ರ ಸಮೀಪದ ನಿಕ್ಕಲ್​ ಕೊಬಾಲ್ಡ್​ ಗಣಿಗಾರಿಕೆಯನ್ನು ಪ್ರಾರಂಭಿಸದಂತೆ ಆ ಭಾಗದ ರೈತರು ನೀಡಿದ್ದ ಮನವಿಯನ್ನು ಆಲಿಸಿ ಗಣಿಗಾರಿಕೆ ನಿಲ್ಲಿಸುವಂತೆ ಮಾಡಿದ್ದೇನೆ ಎಂದು ಸೋಮಣ್ಣ ತಿಳಿಸಿದರು.

ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ರಾಜ್ಯ ಸರ್ಕಾರ ಗಂಡನ ದುಡ್ಡು ಕಿತ್ತುಕೊಂಡು ಹೆಂಡತಿಗೆ ಕೊಡುತ್ತಿದೆ. ಟ್ಯಾಕ್ಸ್​ ಸಿದ್ದರಾಮಯ್ಯರಾಗಿ ಎಲ್ಲದರ ಮೇಲೂ ತೆರಿಗೆ ಹಾಕಿದ್ದಾರೆ. ರೈತರಿಗೆ ಸರಿಯಾಗಿ ವಿದ್ಯುತ್​ ನೀಡಲು ವಿಲವಾಗಿರುವ ಸರ್ಕಾರ ಕತ್ತಲೆ ಭಾಗ್ಯ ನೀಡುತ್ತಿದೆ ಎಂದು ಆರೋಪಿಸಿದರು. ಅಧಿವೇಶನದ ನಂತರ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಕಾರ್ಯಕ್ರಮದಲ್ಲಿ ಅರ್ಹ ಲಾನುಭವಿಗಳಿಗೆ ಸವಲತ್ತು ವಿತರಿಸಿ ನಂತರ ಸಾರ್ವಜನಿಕರ ಅರ್ಜಿ ಸ್ವೀಕರಿಸಲಾಯಿತು. ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್​, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸ್ವಪ್ನನಟೇಶ್​, ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಅಂಜನ್​ ಕುಮಾರ್​, ಚಿದಾನಂದ್​, ಆಶಾರಾಜಶೇಖರ್​, ಮುಖಂಡರಾದ ಹೆಬ್ಬಾಕರವಿ, ಕೊಂಡಜ್ಜಿವಿಶ್ವನಾಥ್​, ಶಂಕರೇಗೌಡ, ಡಾ.ಚೌದ್ರಿನಾಗೇಶ್​, ದೊಡ್ಡೇಗೌಡ, ಮುತ್ತಣ್ಣ, ತಿಪಟೂರು ಎಸಿ ಸಪ್ರಶ್ರೀ, ತಹಸೀಲ್ದಾರ್​ ಎ.ಎನ್​.ಕುಂ.ಇ.ಅಹಮದ್​ ಇದ್ದರು.

ಕೆರೆಗೆ ಅನುದಾನ: ತುರುವೇಕೆರೆ ಕೆರೆಯನ್ನು ಮೈಸೂರು ಕೆರೆಯಂತೆ ಅಭಿವೃದ್ಧಿ ಪಡಿಸುವಂತೆ ಮನವಿ ನೀಡಿದ್ದು, ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ, ಶಾಸಕರು ಪತ್ರದೊಂದಿಗೆ ಮಾಹಿತಿ ನೀಡಿದರೆ ಕೇಂದ್ರ ಸರ್ಕಾರದ ಸಚಿವರ ಬಳಿ ಮಾತನಾಡಿ 50 ಕೋಟಿ ರೂ. ಅನುದಾನ ಕೊಡಿಸಲಾಗುವುದು ಎಂದು ಸೋಮಣ್ಣ ಭರವಸೆ ನೀಡಿದರು.

ಹೋರಾಟಕ್ಕೆ ಬಂದರೆ ಗೂಟದ ಕಾರು ಕಿತ್ತಾಕುತ್ತಾರೆ: ಈ ಜಿಲ್ಲೆಯಿಂದ ಸಂಸದನಾಗಿದ್ದೀಯಾ, ಹೇಮಾವತಿ ಎಕ್ಸ್​ ಪ್ರೆಸ್​ ಕೆನಲ್​ ವಿರುದ್ಧವಾಗಿ ಹೋರಾಟಕ್ಕೆ ಬರುವಂತೆ ಈ ಭಾಗದ ಜನರು, ಜನಪತ್ರಿನಿಧಿಗಳಿಂದ ಒತ್ತಡ ಬಂದಿದೆ. ಆದರೆ, ನಾನು ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ಮಾಜಿ ಶಾಸಕ ಮಸಾಲಜಯರಾಮ್​ ಅವರಿಗೆ ಹೇಳಿದ್ದೀನಿ, ಕೇಂದ್ರದ ಮಂತ್ರಿಯಾಗಿ ಹೋರಾಟಕ್ಕೆ ಬರಲು ಸಾಧ್ಯವಿಲ್ಲ. ಬಂದರೆ ಗೂಟದ ಕಾರು ಕಿತ್ತು ಹಾಕ್ತಾರೆ ಎಂದ ಸೋಮಣ್ಣ, ಈ ರಾಜ್ಯ ಸರ್ಕಾರಕ್ಕೆ ಕಿವಿನೂ ಇಲ್ಲ ತಲೆನೂ ಇಲ್ಲ ಎಂದು ಜರಿದರು.

ಬಿ.ಎಲ್​.ಸಂತೋಷ್​ ಸಲಹೆಯಿಂದ ಮಂತ್ರಿ ಭಾಗ್ಯ: ನಾನು ಎಂಪಿ ಆಗಿದ್ದೀನಿ ಸಾಕು ಎಂದು ಸುಮ್ಮನಾಗಿದ್ದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್​ ಮಾಡುವಂತೆ ಬಿ.ಎಲ್​.ಸಂತೋಷ್​ ಸೂಚಿಸಿದರು. ನಂತರ ಶುಭಾಶಯ ತಿಳಿಸಿದ ಕೂಡಲೇ ನರೇಂದ್ರ ಮೋದಿ ಅವರು ತಬ್ಬಿಕೊಂಡು ನನಗೆ ಡಬಲ್​ ವಿಷ್​ ಮಾಡಿದರು. ರಾಜ್ಯದಿಂದ ಆಯ್ಕೆಯಾದ ಸಂಸದರಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳಿದ್ದರೂ ನನ್ನನ್ನು ಕೇಂದ್ರ ಸಚಿವರನ್ನಾಗಿ ಮಾಡಿದು ನಿಮ್ಮೆಲ್ಲರ ಆಶೀರ್ವಾದದಿಂದ ಎಂದು ಸೋಮಣ್ಣ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net