ಅಂಗವಿಕಲನ ಪಡಿತರ ಚೀಟಿ ರದ್ದು

19M.D.R.6
Published on

ಮದ್ದೂರು: ತಾಲೂಕಿನ ಮಲ್ಲನಕುಪ್ಪೆ ಗ್ರಾಮದ ಅಂಗವಿಕಲ ರವೀಂದ್ರ ಅವರ ಪಡಿತರ ಚೀಟಿಯನ್ನು ರದ್ದುಪಡಿಸಿದ್ದು, ಮತ್ತೆ ಪಡಿತರ ಚೀಟಿ ನೀಡಬೇಕು ಎಂದು ಒತ್ತಾಯಿಸಿ ಸರ್ವೋದಯ ವಿಕಲಚೇತನರ ಸಂಘದಿಂದ ತಹಸೀಲ್ದಾರ್ ಟಿ.ಎನ್.ನರಸಿಂಹಮೂರ್ತಿ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.


ಸರ್ವೋದಯ ವಿಕಲಚೇತನರ ಸಂಘದ ಅಧ್ಯಕ್ಷ ಎಸ್.ಸಿ.ರಮೇಶ್ ಮಾತನಾಡಿ, ತಾಲೂಕಿನ ಮಲ್ಲನಕುಪ್ಪೆ ಗ್ರಾಮದ ಭಾಗ್ಯಮ್ಮ ಎಂಬುವರ ಪುತ್ರ ರವೀಂದ್ರ ಮಾನಸಿಕ ಮತ್ತು ದೈಹಿಕ ಅಂಗವಿಕಲರಾಗಿದ್ದಾರೆ. ರವೀಂದ್ರ ಸಹೋದರ ಆದಾಯ ತೆರಿಗೆ ಪಾವತಿಸುತ್ತಿದ್ದಾರೆ ಎಂದು ಪಡಿತರ ಚೀಟಿ ರದ್ದುಗೊಳಿಸಿದ್ದಾರೆ. ಇದರಿಂದ ರವೀಂದ್ರ ಕುಟುಂಬಕ್ಕೆ ಪಡಿತರವಿಲ್ಲದೆ ಪರದಾಡುವ ಸ್ಥಿತಿ ಉಂಟಾಗಿದೆ ಎಂದರು.


ರವೀಂದ್ರ ಸಹೋದರರನ್ನು ಪಡಿತರ ಚೀಟಿಯಿಂದ ತೆಗೆದು ರವೀಂದ್ರ ಅವರಿಗೆ ಅನುಕೂಲ ಕಲ್ಪಿಸಿ ಕೊಡಬೇಕು ಎಂದು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ತಹಸೀಲ್ದಾರ್, ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು. ಸರ್ವೋದಯ ವಿಕಲಚೇತನರ ಸಂಘದ ಗೌರವಾಧ್ಯಕ್ಷ ಮಾದೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net