

ಯಳಂದೂರು: ತಾಲೂಕಿನ ವಿವಿಧ ಶಾಲೆಗಳಲ್ಲಿ 5 ರಿಂದ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಂಗವಿಕಲ ವಿದ್ಯಾರ್ಥಿಗಳಿಗೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿರುವ ಕ್ರೀಡಾ ತರಬೇತಿಗೆ ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಕಾಂತರಾಜು ಚಾಲನೆ ನೀಡಿದರು.
ಅಂಗವಿಕಲ ಮಕ್ಕಳಿಗೆ ಕ್ರೀಡಾ ತರಬೇತಿ ನೀಡಲಾಗುವುದು. ಒಟ್ಟು 121 ಅಂಗವಿಕಲ ವಿದ್ಯಾರ್ಥಿಗಳ ಪೈಕಿ 12 ಮಕ್ಕಳು ಹಾಸಿಗೆಯಿಂದ ಮೇಲೇಳಲು ಸಾಧ್ಯವಿರದ ಪರಿಸ್ಥಿತಿಯಲ್ಲಿದ್ದಾರೆ. 29 ಮಕ್ಕಳು ತರಬೇತಿಯಲ್ಲಿ ಭಾಗವಹಿಸಲು ಸಾಧ್ಯವಿರದಷ್ಟು ವಿಕಲಾಂಗತೆ ಹೊಂದಿದ್ದಾರೆ. ಸಂಪೂರ್ಣ ಅಂಧತ್ವದ ಒಬ್ಬ ವಿದ್ಯಾರ್ಥಿ ಇದ್ದಾನೆ. 11 ಮಕ್ಕಳು ಬಹುವಿಕಲತೆಯನ್ನು ಹೊಂದಿದ್ದಾರೆ. ಇವರನ್ನು ಹೊರತುಪಡಿಸಿ ಇತರ ಮಕ್ಕಳಿಗೆ ಮಾರ್ಗದರ್ಶಿ ವಿಶೇಷಚೇತನ ಸಂಸ್ಥೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಕ್ರೀಡಾ ತರಬೇತಿ ನೀಡಲಾಗುತ್ತಿದೆ ಎಂದರು.
ಶಿಕ್ಷಕ ಕೆ.ಎಂ. ಮಧು ಮಾತನಾಡಿ, ಮಕ್ಕಳಿಗೆ ಶಾಟ್‌ಪುಟ್, ಜಾವೆಲಿನ್, ಥ್ರೋಬಾಲ್, ವಾಲಿಬಾಲ್, ತಟ್ಟೆ ಎಸೆತ, ಚೆಸ್ ಹಾಗೂ ಕೇರಂ ಕ್ರೀಡೆಗಳ ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ ತಾಲೂಕಿನ 6 ದೈಹಿಕ ಶಿಕ್ಷಣ ಶಿಕ್ಷಕರು ನೇಮಕಗೊಂಡಿದ್ದಾರೆ. ಇಲ್ಲಿ ತರಬೇತಿ ಪಡೆದ ಮಕ್ಕಳು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಾರೆ. ತಾಲೂಕಿನ ಇಬ್ಬರು ವಿದ್ಯಾರ್ಥಿಗಳು ಕಳೆದ ಬಾರಿ ರಾಜ್ಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲ ನಂಜುಂಡಯ್ಯ, ಬಿಆರ್‌ಸಿ ರಂಗಸ್ವಾಮಿ ದೈಹಿಕ ಶಿಕ್ಷಣ ಶಿಕ್ಷಕರಾದ ಮಹಾದೇವು, ಮುರುಳೀಧರ್, ಸೆಲಿನಾ, ಕೋಮಲಾ, ಮಲ್ಲಿಕಾರ್ಜುನ, ರೇವಣ್ಣ ಮಾರ್ಗದರ್ಶಿ ಸಂಸ್ಥೆಯ ಕಿರಣ್, ಮೇಘಾ ಅನೇಕರು ಇದ್ದರು.