ಅಂಗವಿಕಲ ಮಕ್ಕಳಿಗೆ ವಿಶೇಷ ಆರೈಕೆ ಅಗತ್ಯ

22Manju7
ಬೆಳಗಾವಿ ನಗರದ ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಡಾ. ಎನ್.ಎಸ್ ಮಹಾಂತಶೆಟ್ಟಿ ಉದ್ಘಾಟಿಸಿದರು. ಡಾ.ಎಂ.ವಿ.ಜಾಲಿ, ಡಾ.ಮಹೇಶ ಕಮತೆ, ಡಾ.ವಿನಾಯಕ ಕೋಪರ್ಡೆ, ಡಾ. ಶಿಬಾನಿ ಪ್ರಿಯದರ್ಶಿನಿ, ಡಾ.ರಿತಿಕೇಶ ಪಟ್ನಾಯಕ್ ಇತರರಿದ್ದರು.
Published on

ಬೆಳಗಾವಿ: ಅಂಗವೈಕಲ್ಯದ ಸವಾಲು ಎದುರಿಸುತ್ತಿರುವ ಮಕ್ಕಳ ಬೆಳವಣಿಗೆ ಸಮರ್ಪಕವಾಗಿ ಇರುವುದಿಲ್ಲ. ಅವರಿಗೆ ವಿಶೇಷ ಕಾಳಜಿ ಹಾಗೂ ಆರೈಕೆ ಮಾಡುವುದು ಬಹಳ ಮುಖ್ಯ ಎಂದು ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್.ಎಸ್ ಮಹಾಂತಶೆಟ್ಟಿ ಹೇಳಿದರು.

ನಗರದ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಅಕ್ಯುಪೆಶನಲ್ ಥೆರಪಿ (ಭೌತಿಕ ಚಿಕಿತ್ಸೆ) ವಿಭಾಗವು ಅಂಗವೈಕಲ್ಯ ಹೊಂದಿರುವ ಮಕ್ಕಳ ಆರೈಕೆ ಹಾಗೂ ಅವರ ನಿರ್ವಹಣೆ ಕುರಿತು ಪಾಲಕರಿಗಾಗಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಅಂಗವೈಕಲ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ವೈದ್ಯಕೀಯ ಚಿಕಿತ್ಸೆಯೊಂದಿಗೆ ಭೌತಿಕ ಚಿಕಿತ್ಸೆ ಅತ್ಯವಶ್ಯವಾಗಿ ಬೇಕೇ ಬೇಕು. ಸಾಮಾನ್ಯ ಮಕ್ಕಳಂತೆ ಆಗಲು ಚಿಕಿತ್ಸೆಯೊಂದಿಗೆ ಕಾಳಜಿ ಅವಶ್ಯವಾಗಿರುತ್ತದೆ. ಅದರಲ್ಲಿಯೂ ತಾಯಂದಿರ ಪಾತ್ರ ಮುಖ್ಯ ಎಂದರು.

ಮಕ್ಕಳ ಮೊದಲಿನ 3 ವರ್ಷದ ಕಲಿಕೆ ಮುಖ್ಯವಾಗಿರುತ್ತದೆ. ಈ ಅವಧಿಯಲ್ಲಿ ಒಳ್ಳೆಯ ಮತ್ತು ಕೆಟ್ಟದ್ದು ಎಂಬುದರ ಕುರಿತು ಪರಿಣಾಮ ಬೀರುತ್ತದೆ. ಅದರಲ್ಲಿಯೂ ಹೈರಿಸ್ಕ್ ಮಕ್ಕಳ ಕುರಿತು ಅತ್ಯಧಿಕ ಕಾಳಜಿ ವಹಿಸಬೇಕಾಗುತ್ತದೆ. ಜೀವನ ಪಯರ್ಂತ ಕಲಿಕೆ ಇದ್ದೇ ಇರುತ್ತದೆ. ಆದರೆ ಮಕ್ಕಳ ಪಾಲನೆಯಲ್ಲಿ ಅದರಲ್ಲೂ ತಾಯಿಂದಿರ ಕಾರ್ಯ ಹಾಗೂ ಹಿರಿಯರ ಪಾತ್ರ ಮುಖ್ಯ ಜವಾಬ್ದಾರಿ ಹೊಂದಿರುತ್ತದೆ. ಅಸಾಮಾನ್ಯವಾಗಿರುವ ಮಕ್ಕಳಿಗೆ ವಿಶೇಷ ಕಾಳಜಿ ಇಲ್ಲದೇ ಹೋದರೆ ಅವರ ಬೆಳವಣಿಗೆ ಕುಂಠಿತವಾಗುತ್ತದೆ. ಇವತ್ತಿನ ಮಕ್ಕಳು ನಮ್ಮನ್ನಷ್ಟೇ ನೋಡುವುದಿಲ್ಲ. ಅನೇಕ ವಿಷಯಗಳನ್ನು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯವ ಘಟನೆಗಳಿಂದ ನೋಡಿ ಕಲಿಯುತ್ತಾರೆ. ಕೆಲ ವಿಷಯಗಳು ಒಳ್ಳೆಯ ಇನ್ನೂ ಕೆಲವು ಕೆಟ್ಟ ಘಟನೆಗಳಿರುತ್ತವೆ. ಅವುಗಳ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.

ಚಿಕ್ಕಮಕ್ಕಳ ನರರೋಗ ತಜ್ಞವೈದ್ಯ ಡಾ.ಮಹೇಶ ಕಮತೆ ಮಾತನಾಡಿ, ಮಕ್ಕಳಿಗೆ ವಿಶೇಷ ಕಾಳಜಿ ಜತೆಗೆ ಅವಶ್ಯವಿರುವ ಚಿಕಿತ್ಸೆ ನೀಡುವ ತಂಡದ ಪರಿಶ್ರಮ ಅಲ್ಲದೆ ಸಮಚಿತ್ತ ಹಾಗೂ ಸಮಾಧಾನ ಇರಬೇಕು. ಇದು ಕೇವಲ ಒಬ್ಬರಿಂದ ಸಾಧ್ಯವಿಲ್ಲ. ಕೇವಲ ಮೆಡಿಸಿನ್ ಅಲ್ಲ, ದುಡ್ಡು ಕೊಟ್ಟು ನಂತರ ಬರ್ತೇನೆ ಎಂದರೆ ಸಾಲದು. ಅದಕ್ಕೆ ನಿರಂತರ ಶ್ರಮ ಬೇಕೆ ಬೇಕು. ಶೇ. 100 ರಷ್ಟು ಮಕ್ಕಳು ಸಾಮಾನ್ಯವಾಗುವುದಿಲ್ಲ. ಆದರೆ ಮಗು ಎಲ್ಲ ಕಾರ್ಯ ಮಾಡುವಂತೆ ತಯಾರು ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಎಂ.ವಿ.ಜಾಲಿ ಮಾತನಾಡಿ, ಮಕ್ಕಳ ಬೆಳವಣಿಗೆಗೆ ಸಾಕಷ್ಟು ಮುತುವರ್ಜಿ ವಹಿಸಬೇಕು. ಕೆಲ ಮಕ್ಕಳಿಗೆ ದೈಹಿಕ ಹಾಗೂ ಮಾನಸಿಕವಾಗಿ ಸುರಕ್ಷಿತವಾಗಿ ಸಮಾಜದಲ್ಲಿ ಬೆಳೆಯಲು ದೌರ್ಬಲ್ಯ ಇರುತ್ತದೆ. ಅದನ್ನು ಸರಿಪಡಿಸಲು ಅಗತ್ಯ ಚಿಕಿತ್ಸೆ ಪಡೆಯಬೇಕು. ಅಂತಃ ಮಕ್ಕಳಿಗೆ ಅನುಕೂಲವಾಗಲು ಭೌತಿಕ ಚಿಕಿತ್ಸೆಗೆ ಅವಶ್ಯವಿರುವ ಘಟಕವನ್ನು ಸುಮಾರು 7 ಸಾವಿರ ಚ. ಅ. ಪ್ರದೇಶದಲ್ಲಿ ಪ್ರತ್ಯೇಕವಾಗಿ ಸ್ಥಾಪಿಸಲಾಗುತ್ತಿದೆ. ಆ ಮಕ್ಕಳಿಗೆ ಉತ್ತೇಜನ ನೀಡಿ ಸಾಮಾನ್ಯ ಮಕ್ಕಳಂತೆ ಆಗಲು ಇನ್ನು 3 ತಿಂಗಳಲ್ಲಿ ಕಾರ್ಯಾರಂಭ ಮಾಡಲಾಗುತ್ತಿದೆ ಎಂದು ತಿಳಿಸಿದರು. ಭೌತಿಕ ಚಿಕಿತ್ಸಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಂಜೀವಕುಮಾರ ಮಾತನಾಡಿದರು. ಡಾ.ವಿನಾಯಕ ಕೋಪರ್ಡೆ, ಡಾ. ಶಿಬಾನಿ ಪ್ರಿಯದರ್ಶಿನಿ, ಡಾ.ರಿತಿಕೇಶ ಪಟ್ನಾಯಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net