

ಮೈಸೂರು: ಅಂಗವಿಕಲ ಮಕ್ಕಳನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಸಮನ್ವಗೊಳಿಸುವ ಉದ್ದೇಶದಿಂದ ನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಶುಕ್ರವಾರ ಶಾಸಕ ಎಸ್.ಎ. ರಾಮದಾಸ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.
ಅಂಗವಿಕಲ ಮಕ್ಕಳನ್ನು ಶೈಕ್ಷಣಿಕ ಕ್ಷೇತ್ರದ ಪ್ರತಿಯೊಂದು ಚಟುವಟಿಕೆಯಲ್ಲಿ ಸಮನ್ವಯಗೊಳಿಸಿ ಕಲಿಕೆಯಲ್ಲಿ ತೊಡಗುವಂತೆ ಮಾಡಲು, ಮಕ್ಕಳ ಉತ್ತಮ ಪ್ರಗತಿಗೆ ಅನೂಕೂಲಕರವಾದ ಶೈಕ್ಷಣಿಕ ಪರಿಸರ ನಿರ್ಮಾಣ ಮಾಡಲು ಹಾಗೂ ಮಕ್ಕಳನ್ನು ಹುರಿದುಂಬಿಸುವ ಮೂಲಕ ಉತ್ತಮ ಸಾಧನೆಗೆ ತಲುಪುವಂತೆ ಪ್ರೋತ್ಸಾಹಿಸಲು ಮಕ್ಕಳಿಗೆ ಅವಶ್ಯಕವಾಗಿರುವ ಪ್ರಮುಖ ಪರಿಕರಗಳಾದ ವಾಟರ್‌ಬೆಡ್, ವೀಲ್ಚೇರ್, ಸಿಪಿ ಚೇರ್, ಕ್ರಚಸ್, ಬುದ್ಧಿಮಾಂದ್ಯ ಮಕ್ಕಳಿಗೆ ಎಂಆರ್ ಕಿಟ್ ವಾಕರ್, ಸ್ಟಾೃಂಡಿಂಗ್ ಬೆಡ್, ಕೃತಕ ಕಾಲು, ಹೆರ್‌ಬೆಡ್‌ಗಳನ್ನು 18 ವರ್ಷದೊಳಗಿನ ಅರ್ಹ 164 ಮಕ್ಕಳಿಗೆ ಉಚಿತವಾಗಿ ನೀಡಲಾಗುವುದು ಎಂದು ಎಸ್.ಎ. ರಾಮದಾಸ್ ಹೇಳಿದರು.
ಕೆ.ಜಿ. ಕೊಪ್ಪಲು ಸರ್ಕಾರಿ ಶಾಲಾ ಆವರಣದಲ್ಲಿ ನಗರ ಪಾಲಿಕೆ ವತಿಯಿಂದ ನೂತನವಾಗಿ ನಿರ್ಮಿಸಿರುವ ಕಟ್ಟಡವನ್ನು ಅಂಗವಿಕಲ ಮಕ್ಕಳ ಆರೈಕೆ ಕೇಂದ್ರವನ್ನಾಗಿ ಮಾಡಲು ತೀರ್ಮಾನಿಸಲಾಯಿತು. ಈ ಕೇಂದ್ರಕ್ಕೆ ಬೇಕಾದ ಎಲ್ಲ ಅಗತ್ಯ ವಸ್ತುಗಳನ್ನು ನಗರ ಪಾಲಿಕೆಯಿಂದ ಪೂರೈಕೆ ಮಾಡಿ ನಂತರ ಆ ಕಟ್ಟಡದ ಸಂಪೂರ್ಣ ಜವಾಬ್ದಾರಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಕೃಷ್ಣರಾಜ ಕ್ಷೇತ್ರದ ಬೆಮಲ್ ಮುಖ್ಯ ರಸ್ತೆ, ಮದರ್ ತೆರೇಸ ನರ್ಸಿಂಗ್ ಕಾಲೇಜು ಎದುರು, ಭ್ರಮರಾಂಭ ಕಲ್ಯಾಣ ಮಂಟಪದ ಬಳಿ, ಶ್ರೀರಾಂಪುರದಲ್ಲಿ ತೆರೆದಿರುವ ‘ನಮ್ಮ ಕ್ಲಿನಿಕ್’ ಅನ್ನು ಡಿ.25 ರಂದು ಉದ್ಘಾಟನೆ ಮಾಡಲಾಗುವುದು. ಉದ್ಘಾಟನೆಯ ನಂತರ 164 ಅಂಗವಿಕಲರ ಮಕ್ಕಳಿಗೆ ವಿವಿಧ ಪರಿಕರಗಳನ್ನು ವಿತರಿಸಲಾಗುವುದು ಎಂದು ಎಸ್.ಎ. ರಾಮದಾಸ್ ಹೇಳಿದರು.
ಸಭೆಯಲ್ಲಿ ನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ, ಉಪ ಆಯುಕ್ತೆ ರೂಪ, ಕಾರ್ಯಪಾಲಕ ಇಂಜಿನಿಯರ್‌ಗಳಾದ ಮಧುಸೂದನ್, ರಂಜಿತ್ ಕುಮಾರ್, ಸತ್ಯಮೂರ್ತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್. ಪ್ರಸಾದ್, ತಾಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ್ವರಿ ಹಾಗೂ ಇತರರು ಇದ್ದರು.