ಅಂಗನವಾಡಿಗಳಿಗೆ ನಿವೇಶನ ಕಲ್ಪಿಸಿ

14 KAMPLI 02
Published on

ಕಂಪ್ಲಿ: ಹೊಸ ಕ್ರಿಯಾಯೋಜನೆಗಳನ್ನು ಸಕಾಲಕ್ಕೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಾಲೂಕು ಉಸ್ತುವಾರಿ ಅಧಿಕಾರಿ, ಶಿರಸಿಯ ಎಸಿ ಕಾವ್ಯಾರಾಣಿ ಸೂಚಿಸಿದರು.

ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೋಮವಾರ ಮಾತನಾಡಿದರು. ಸಭೆಗೆ ಬರುವಾಗ ಅಗತ್ಯ ಅಂಕಿ-ಅಂಶಗಳ ಸಿದ್ಧತೆಯೊಂದಿಗೆ ಬರಬೇಕು. ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಯೇ ಸಭೆಗೆ ಆಗಮಿಸಬೇಕು. ಇಲಾಖೆ ಎದುರಿಸುತ್ತಿರುವ ಸಮಸ್ಯೆ ಹಾಗೂ ಯೋಜನೆಗಳ ಮಾಹಿತಿ ನೀಡಬೇಕು. ಎಂದು ತಾಕೀತು ಮಾಡಿದರು.

ತಾಲೂಕಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ.90 ಸಾಧಿಸಬೇಕೆಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕಿನಲ್ಲಿ 39 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಲತೀಫಾಬೇಗಂ ತಿಳಿಸಿದರು. ಸ್ಥಳೀಯ ಸಂಸ್ಥೆಗಳು ಅಂಗನವಾಡಿ ಕೇಂದ್ರಗಳಿಗೆ ನಿವೇಶನ ದೊರಕಿಸಿ ಕೊಡಬೇಕು ಎಂದು ತಾಪಂ ಇಒ ಆರ್.ಕೆ.ಶ್ರೀಕುಮಾರ್, ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನಗೆ ಎಸಿ ಕಾವ್ಯಾರಾಣಿ ಸೂಚಿಸಿದರು. ತಹಸೀಲ್ದಾರ್ ಜೂಗಲ ಮಂಜುನಾಯ್ಕ, ಇತರ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.

ಇದಕ್ಕೂ ಮುನ್ನ ರಾಮಸಾಗರದ ಸರ್ಕಾರಿ ಆಸ್ಪತ್ರೆಗೆ ಕಾವ್ಯಾರಾಣಿ ಭೇಟಿ ನೀಡಿದ್ದರು. ಸಿಬ್ಬಂದಿ ಕೊರತೆ ನೀಗಿಸಬೇಕು. ಲ್ಯಾಬ್ ಟೆಕ್ನಿಷಿಯನ್, ಆಂಬುಲೆನ್ಸ್ ಸೌಲಭ್ಯ ಕಲ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬೆಂಚ್, ಸಮವಸ್ತ್ರ, ಪಠ್ಯಪುಸ್ತಕ, ಕ್ರೀಡಾ ಉಪಕರಣಗಳ ಕೊರತೆ ಇರುವುದು ಕಂಡು ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net