

ಧಾರವಾಡ: ಎಲ್ಕೆಜಿ, ಯುಕೆಜಿ ತರಗತಿಗಳನ್ನು ಅಂಗನವಾಡಿ ಕೇಂದ್ರಗಳಲ್ಲಿ ಆರಂಭಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಎಲ್ಕೆಜಿ, ಯುಕೆಜಿ ತರಗತಿಗಳನ್ನು ಸರ್ಕಾರಿ ಪಬ್ಲಿಕ್ ಶಾಲೆಗಳ ಬದಲು ಅಂಗನವಾಡಿ ಕೇಂದ್ರಗಳಲ್ಲಿ ಪ್ರಾರಂಭಿಸುವುದು, ಕಾರ್ಯಕರ್ತೆಯರಿಗೆ ತರಬೇತಿ ನೀಡುವುದು, ಪಠ್ಯಪುಸ್ತಕ, ಸಮವಸ್ತ್ರಗಳ ವಿತರಣೆ, ಪ್ರಾಥಮಿಕ ಶಾಲೆಗೆ ದಾಖಲಾಗಲು ಅಂಗನವಾಡಿ ಕೇಂದ್ರಗಳಿಂದಲೇ ವರ್ಗಾವಣೆ ಪತ್ರ (ಟಿಸಿ) ನೀಡುವಂತೆ ಆದೇಶಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಶಿಕ್ಷಣ 2016 ಹಾಗೂ ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅಡಿ ಅಂಗನವಾಡಿ ಕೇಂದ್ರಗಳನ್ನು ಬಲವರ್ಧನೆಗೆ ಪ್ರಸ್ತಾಪಿಸಿರುವುದು ಸ್ವಾಗತಾರ್ಹ. ಆದರೆ, ಸರ್ಕಾರಿ ಪಬ್ಲಿಕ್ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ತರಗತಿ ಆರಂಭಿಸುವ ಪ್ರಕ್ರಿಯೆ ನಡೆಸುತ್ತಿರುವುದು ವಿಷಾದನೀಯ ಎಂದು ದೂರಿದರು.
ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ಕೂಡಲೆ ಸರ್ಕಾರ ಸಮಸ್ಯೆ ಪರಿಹರಿಸಲು ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬೆಂಗಳೂರು ಚಲೋ ನಡೆಸಲಾಗುವುದು ಎಂದು ಎಚ್ಚರಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿಪತ್ರ ರವಾನಿಸಿದರು.
ಅಧ್ಯಕ್ಷೆ ನೂರಜಹಾನ ಸಮುದ್ರಿ, ವೀರಮ್ಮ ತುರ್ಕಾಣಿ, ರತ್ನಾ ಶಿರೂರ, ಎನ್.ಎ. ಖಾಜಿ, ಸಾವಕ್ಕಾ ಕಮ್ಮಾರ, ವಿಜಯಲಕ್ಷ್ಮೀ ಹಿರೇಮಠ, ಗಿರಿಜಾ ಬಡಿಗೇರ, ರಾಜೇಶ್ವರಿ ಕೋಟೂರ, ಭಾರತಿ ಆಲೂರ, ಸಂಧ್ಯಾ ಕುಲಕರ್ಣಿ, ಗಂಗಮ್ಮ ಕಮ್ಮಾರ, ಸರೋಜಾ ಮೇಲಿನಮನಿ, ಅನಿತಾ ಉಪಾಧ್ಯ, ಇತರರು ಇದ್ದರು.