ಅಂಗನವಾಡಿಗಳಲ್ಲಿ ಸ್ವಚ್ಛತೆ ಕಾಪಾಡಿ

16ard02
ಔರಾದ್ ತಾಲೂಕಿನ ಬೋರಾಳ ಎರಡನೇ ಅಂಗನವಾಡಿ ಕೇಂದ್ರಕ್ಕೆ ಶನಿವಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಭೇಟಿ ನೀಡಿ ಪರಿಶೀಲಿಸಿದರು. ಉಪನಿರ್ದೇಶಕ ಶ್ರೀಧರ, ಸಿಡಿಪಿಒ ಇಮಾಲಪ್ಪ ಡಿಕೆ, ಬಿಇಒ ಬಿ.ಜೆ.ರಂಗೇಶ, ಸರಸ್ವತಿ ಇದ್ದರು.
Published on

ಔರಾದ್: ಎಲ್ಲ ಮಕ್ಕಳ ಆರೋಗ್ಯದ ಹಿತ ಕಾಪಾಡುವುದು ಮುಖ್ಯವಾಗಿದ್ದು, ಅಂಗನವಾಡಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸ್ವಚ್ಛತೆಗೆ ಗಮನಹರಿಸಬೇಕೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಸೂಚಿಸಿದರು.

ಬೋರಾಳ ಎರಡನೇ ಅಂಗನವಾಡಿ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ, ಒಂದೇ ಕೋಣೆಯಲ್ಲಿ ಮಕ್ಕಳಿಗೆ ಪಾಠ ಮತ್ತು ಅಡುಗೆ ಮಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಅಡುಗೆ ಬೇರೆ ಕೋಣೆಯಲ್ಲಿ ಮಾಡಬೇಕು ಎಂದು ತಿಳಿಸಿದರು.

ಮಕ್ಕಳ ಹಾಜರಾತಿ, ಸೇರಿ ವಿವಿಧ ಮಾಹಿತಿ ಪರಿಶೀಲಿಸಿದ ಅವರು, ಎಲ್ಲ ಮಕ್ಕಳಿಗೆ ನಿತ್ಯ ಪೌಷ್ಟಿಕ ಆಹಾರ ವಿತರಣೆ ಮಾಡುವುದಲ್ಲದೇ ಅಪೌಷ್ಟಿಕತೆ ನಿವಾರಣೆಗೆ ಎಲ್ಲರೂ ಕೈಜೋಡಿಸುವ ಅಗತ್ಯವಿದೆ ಎಂದರು.

ಕೇಂದ್ರದ ಪಕ್ಕದಲ್ಲಿಯೇ ಎರಡು ತೆರದ ಬಾವಿಗಳಿರುವುದರಿಂದ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ ಅಂಗನವಾಡಿ ಕಾರ್ಯಕರ್ತೆ ಸರಸ್ವತಿ ತಿಳಿಸಿದಾಗ ಕೂಡಲೇ ತಾಪಂ ಸಹಾಯಕ ನಿರ್ದೇಶಕರಿಗೆ ಮಾತನಾಡಿ, ಸಮಸ್ಯೆ ಬಗೆಹರಿಸಲು ಕೋಸಂಬೆ ತಿಳಿಸಿದರು.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೂ ಭೇಟಿ ನೀಡಿ, ಶೌಚಗೃಹ ಸಮರ್ಪಕ ಬಳಕೆ ಮಾಡಬೇಕು. ಮಕ್ಕಳಿಗೆ ನಿತ್ಯ ಎರಡು ಮೊಟ್ಟೆ ನೀಡಬೇಕು. ಶಿಕ್ಷಕರು ನೀಡಲು ಹಿಂದೇಟು ಹಾಕಿದಾರೆ ಅವರಿಗೆ ನೋಟಿಸ್ ನೀಡಬೇಕು ಎಂದು ಬಿಇಒ ಅವರಿಗೆ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಜೀರ್ಗಾ(ಬಿ), ಕೌಡಗಾಂವ, ಕೌಠಾ(ಬಿ) ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಂ.ಶ್ರೀಧರ, ಸಿಡಿಪಿಒ ಇಮಾಲಪ್ಪ ಡಿ.ಕೆ., ಬಿಇಒ ಬಿ.ಜೆ.ರಂಗೇಶ, ಮುಖ್ಯಗುರು ಶಿವ ಮಂಗಲಾ , ಸತೀಶ ಮಜಗೆ, ಶೀರಿನ ಭಾಸ್ಕರ್, ನಿರ್ಮಲಾ ಸ್ವಾಮಿ, ಕ್ರಿಸ್ತಕುಮಾರಿ, ಎಸ್‌ಡಿಎಂಸಿ ಅಧ್ಯಕ್ಷ ಮಹಾದೇವ ಮಚಕುರಿ, ವಲಯ ಮೇಲ್ವಿಚಾರಕಿ ರಾಜೇಶ್ರೀ , ಅಂಗನವಾಡಿ ಕಾರ್ಯಕರ್ತೆ ಸರಸ್ವತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net