ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಚಿಂತನೆ: ಸಚಿವ ಹಾಲಪ್ಪ ಆಚಾರ್ ಅಂಗನವಾಡಿ ಸ್ಮಾರ್ಟ್‌ಕ್ಲಾಸ್ ತರಬೇತಿಗೆ ಚಾಲನೆ

ANGANVADI
Published on

ಬಿಡದಿ: ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ತೆರೆಯುವ ಚಿಂತನೆ ಇದ್ದು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅವಕಾಶ ನೀಡಿದರೆ ಅದಕ್ಕೆ ಪೂರಕವಾದ ವ್ಯವಸ್ಥೆ ಮಾಡಿಕೊಳ್ಳಲಾಗುವುದು, ಆದರೆ ಈ ಬಗ್ಗೆ ಸರ್ಕಾರದ ಹಂತದಲ್ಲಿ ಇನ್ನೂ ತೀರ್ವಾನವಾಗಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಬಸಪ್ಪ ಆಚಾರ್ ತಿಳಿಸಿದರು.

ಪುರಸಭೆಯ ತಮ್ಮಣ್ಣನದೊಡ್ಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ/ಸಹಾಯಕಿಯರ ತರಬೇತಿ ಕೇಂದ್ರದಲ್ಲಿ ಅಂಗನವಾಡಿ ಸ್ಮಾರ್ಟ್‌ಕ್ಲಾಸ್‌ಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿ ಸ್ಮಾರ್ಟ್ ಕ್ಲಾಸ್ ಮೂಲಕ ಮಕ್ಕಳಿಗೆ ಡಿಜಿಟಲ್ ಶಿಕ್ಷಣ ನೀಡಲಾಗುವುದು ಎಂದರು.

ಎಲ್ಲ ಜಿಲ್ಲೆಗಳಲ್ಲಿ ಮಕ್ಕಳ ಗುಣಾತ್ಮಕ ಚಟುವಟಿಕೆಗಳಿಗೆ ಆದ್ಯತೆ ನೀಡುವ ದೃಷ್ಟಿಯಿಂದ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗುತ್ತಿದೆ. ನಂತರ ಎಲ್ಲ ಅಂಗನವಾಡಿಗಳಿಗೂ ಸ್ಮಾರ್ಟ್ ಕ್ಲಾಸ್‌ಗಳನ್ನು ವಿಸ್ತರಿಸಲಾಗುವುದು. ತಾಂತ್ರಿಕ ಯುಗದಲ್ಲಿ ಮಕ್ಕಳಿಗೆ ಡಿಜಿಟಲ್ ಶಿಕ್ಷಣ ನೀಡಬೇಕಾಗಿದೆ. ವಿಷಯ ಮತ್ತು ಚಿತ್ರ ನೋಡುವುದರಿಂದ ಕಣ್ಣು ಮತ್ತು ನೆನಪು ಎರಡೂ ಕೆಲಸ ವಾಡುತ್ತವೆ. ಇದರಿಂದ ಮಕ್ಕಳಲ್ಲಿ ನೆನಪಿನ ಶಕ್ತಿ ವೃದ್ಧಿಯಾಗಿ ಹೆಚ್ಚು ವಿಷಯಗಳನ್ನು ಕಲಿಯಲು ಸಾಧ್ಯವಾಗುತ್ತದೆ ಎಂದರು.

ಬಿಡದಿ ಭಾಗದಲ್ಲಿ ದೊಡ್ಡಮಟ್ಟದ ಕಾರ್ಖಾನೆಗಳು ಇರುವುದರಿಂದ ಬಾಷ್ ಕಂಪನಿ ತನ್ನ ಸಿಎಸ್‌ಆರ್ ಅನುದಾನದಲ್ಲಿ ತರಬೇತಿ ಕೇಂದ್ರ ನಿರ್ಮಿಸಿ, ಮೂಲಸೌಕರ್ಯ ಕಲ್ಪಿಸಿ ಶಿಕ್ಷಣಕ್ಕೆ ಪೂರಕ ವಾತಾವರಣ ನಿರ್ಮಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ್, ಜಿಪಂ ಸಿಇಒ ಇಕ್ರಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕಿ ಪ್ರಿಯಾಂಕ ಮೇರಿ ಪ್ರಾನ್ಸಿಸ್, ಜಿಲ್ಲಾ ಉಪನಿರ್ದೇಶಕ ಸಿ.ವಿ.ರಾಮನ್, ಪುರಸಭೆ ಸದಸ್ಯರಾದ ಮಂಜುಳಾ ಗೋವಿಂದಯ್ಯ, ರಮೇಶ್, ನಾಗರಾಜು, ಮಾಜಿ ಸದಸ್ಯರಾದ ಬಿ.ಎಂ.ರಮೇಶ್ ಕುವಾರ್, ಕುವಾರ್.ಟಿ, ಮುಖಂಡರಾದ ರಾಮಕೃಷ್ಣಯ್ಯ, ಬಸವರಾಜು ಸೇರಿ ವಿವಿಧ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಕಾರ್ಯಕರ್ತೆಯರು ಆಯೋಜಿಸಿದ್ದ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ ಸಚಿವರು ಮತ್ತು ಇಲಾಖೆ ಅಧಿಕಾರಿಗಳ ಗಮನ ಸೆಳೆಯಿತು. ಸ್ಮಾರ್ಟ್‌ಕ್ಲಾಸ್ ತೆರೆದಿರುವುದರಿಂದ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದ್ದು, ಕಾರ್ಯಕರ್ತೆಯರ ಕಾರ್ಯಕ್ಕೆ ಸಚಿವ ಆಚಾರ್ ಹಾಲಪ್ಪ ಬಸಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಸಚಿವರಿಗೆ ವಿವಿಧ ಬೇಡಿಕೆಗಳ ಮನವಿ: ಅಂಗನವಾಡಿ ಕಾರ್ಯಕರ್ತೆಯರು/ಸಹಾಯಕಿಯರನ್ನು ಕಾಯಂಗೊಳಿಸಬೇಕು. ಸೇವೆ ಆಧಾರದ ಮೇಲೆ ವಿದ್ಯಾರ್ಹತೆ ಪರಿಗಣಿಸಿ ಮೇಲ್ವಿಚಾರಕರ ಹುದ್ದೆಗೆ ನೇರ ನೇಮಕಾತಿ ಮಾಡಬೇಕು. ಆರೋಗ್ಯ ವಿಮೆ ಮತ್ತು ಪಿಂಚಣಿ ವ್ಯವಸ್ಥೆ ಕಲ್ಪಿಸಬೇಕು. ಮಿನಿ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಬೇಕು, ಗೌರವಧನ ಹೆಚ್ಚಿಸಬೇಕು ಹಾಗೂ ಇತರ ಇಲಾಖೆಗಳ ಕೆಲಸಗಳಿಗೆ ನಮ್ಮನ್ನು ನಿಯೋಜಿಸಬಾರದೆಂದು ಅಂಗನವಾಡಿ ಕಾರ್ಯಕರ್ತೆಯರು ಸಚಿವರಿಗೆ ಮನವಿ ಸಲ್ಲಿಸಿದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕರ ಆದೇಶದಂತೆ ಸಿಎಂ ಬಸವರಾಜ ಬೊವ್ಮಾಯಿ ನಡೆದುಕೊಳ್ಳುತ್ತಾರೆ. ನಮ್ಮಲ್ಲಿ ಅಸಮಾಧಾನವಿಲ್ಲ. ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನ ಮಾಡಿ, ಸರ್ಕಾರದ ಇಮೇಜ್ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ವಾಡುವ ಮೂಲಕ ಮುಂದಿನ ಬಜೆಟ್ ತಯಾರಿಯಲ್ಲಿದ್ದೇವೆ. ಅಧಿಕಾರ ಇಲ್ಲದವರು ಸುಳ್ಳು ಸುದ್ದಿ ಹಬ್ಬಿಸುವುದು ಸಹಜ, ಅದಕ್ಕೆ ಮಹತ್ವ ನೀಡುವ ಅವಶ್ಯಕತೆಯಿಲ್ಲ. > ಹಾಲಪ್ಪ ಬಸಪ್ಪ ಆಚಾರ್, ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net