

ಬಳ್ಳಾರಿ : ರಾಜ್ಯ ಸರ್ಕಾರ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಕಲ್ಯಾಣ ಕರ್ನಾಟಕದ ಅಂಗನವಾಡಿ ಕೇಂದ್ರಗಳ ಮೂಲಕ ಜಾರಿಗೊಳಿಸಬೇಕು ಎಂದು ಅಂಗನವಾಡಿ ನೌಕರರ ಜಿಲ್ಲಾ ಸಮಿತಿ ಅಧ್ಯಕ್ಷೆ ಉಮಾದೇವಿ ಒತ್ತಾಯಿಸಿದರು.
ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಜಿಲ್ಲಾ ಸಮಿತಿಯಿಂದ ವಿವಿಧ ಬೇಡಿಕೆಗಳಿಗೆ ಪ್ರತಿಭಟಿಸಿ ಮಾತನಾಡಿದರು. ಇನ್ನೂ ಮುಂದೆ 3ರಿಂದ 6 ವಯಸ್ಸಿನ ಮಕ್ಕಳ ಬಾಲ್ಯದ ಹಾರೈಕೆ ಮತ್ತು ಶಿಕ್ಷಣದ ಜವಾಬ್ದಾರಿ ಶಿಕ್ಷಣ ಇಲಾಖೆ ವಹಿಸಿಕೊಳ್ಳಲಿವೆ. ಇದುವರೆಗೆ ಬಹುತೇಕ ನಿರ್ವಹಿಸುತ್ತಿದ್ದ ಅಂಗನವಾಡಿ ಕೇಂದ್ರಗಳಿಗೆ ಸಹಜವಾಗಿಯೇ ಕೆಲಸವಿಲ್ಲದಂತಾಗುತ್ತದೆ. ಅಂಗನವಾಡಿ ಕೇಂದ್ರಗಳಲ್ಲಿ ವೇತನವಿಲ್ಲದೆ ಗೌರವಧನಕ್ಕೆ ದುಡಿದ ದುರ್ಬಲ ವಿಭಾಗಕ್ಕೆ ಸೇರಿದ ಮಹಿಳಾ ನೌಕರರು ಉದ್ಯೋಗ ಕಳೆದುಕೊಂಡು ಬೀದಿ ಪಾಲಾಗಲಿದ್ದಾರೆ. ಅಂಗನವಾಡಿ ಕೇಂದ್ರಗಳು ಮುಚ್ಚುವುದರಿಂದ, ಬಡ ಮಕ್ಕಳಿಗೆ, ಗರ್ಭಿಣಿ ಹಾಗೂ ಬಾಣಂತಿ ಮಹಿಳೆಯರಿಗೆ ದೊರೆಯುತ್ತಿದ್ದ ಪೌಷ್ಠಿಕ ಆಹಾರ ದೊರೆಯದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಆದ್ದರಿಂದ, ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಶಿಕ್ಷಣ ಇಲಾಖೆಯ ಮೂಲಕ ಜಾರಿಗೊಳಿಸುವುದನ್ನು ವಾಪಸ್ ಪಡೆದು ಅಂಗನವಾಡಿ ಕೇಂದ್ರಗಳ ಮೂಲಕ ಜಾರಿಗೊಳಿಸುವಂತೆ ಆಗ್ರಹಿಸಿದರು.
ಮುಖಂಡರಾದ ಗೀತಾ, ವಿಮಲಾ, ರುದ್ರಮ್ಮ, ರಾಣಿ ಎಲಿಜಬೆತ್, ಕೆ.ಈರಮ್ಮ ಇತರರಿದ್ದರು.