ಅಂಗನವಾಡಿ ಶಿಕ್ಷಕಿ ನೇಮಕಾತಿಗೆ ವಿರೋಧ, ಕೇಂದ್ರದ ಬೀಗ ಕೊಡಲು ನಿರಾಕರಿಸಿದ ಗ್ರಾಮಸ್ಥರು

3
Published on

ದಾಬಸ್‌ಪೇಟೆ: ಸೋಂಪುರ ಹೋಬಳಿ ಎಡೇಹಳ್ಳಿಯ ಅಂಗನವಾಡಿ ಕೇಂದ್ರಕ್ಕೆ ವರ್ಗವಾಗಿ ಬಂದಿರುವ ಶಿಕ್ಷಕಿಗೆ ಕೇಂದ್ರದ ಬೀಗ ಕೊಡದೆ ಗ್ರಾಮಸ್ಥರು ತಡೆದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಹೊಸಹಳ್ಳಿಯಲ್ಲಿ ಅಂಗನವಾಡಿ ಸಹಾಯಕಿಯಾಗಿದ್ದ ಸವಿತಾ ಎಂಬುವರಿಗೆ ಜನವರಿಯಲ್ಲಿ ಶಿಕ್ಷಕಿಯಾಗಿ ಬಡ್ತಿ ನೀಡಿತ್ತು. ಎರಡು ವರ್ಷಗಳಿಂದ ಎಡೇಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕಿ ಇಲ್ಲದ ಕಾರಣ, ಆ ಕೇಂದ್ರಕ್ಕೆ ಸವಿತಾ ಅವರನ್ನು ವರ್ಗಾಯಿಸಿತ್ತು.

ವಿಷಯ ತಿಳಿದ ಗ್ರಾಮಸ್ಥರು, ಸವಿತಾ ಅವರು ಎಡೇಹಳ್ಳಿಯಿಂದ 5 ಕಿಮೀ ದೂರದ ಹೊಸಹಳ್ಳಿ ನಿವಾಸಿಯಾಗಿದ್ದಾರೆ. ಆದ್ದರಿಂದ, ಸರ್ಕಾರಿ ನಿಯಮದಂತೆ ನೇಮಕಾತಿ ರದ್ದುಪಡಿಸಿ, ಎಡೇಹಳ್ಳಿಯ ನಿರುದ್ಯೋಗಿ ಯುವತಿಯರನ್ನು ನೇಮಿಸುವಂತೆ ಒತ್ತಾಯಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು. ಇದುವರೆಗೂ ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ.

ಎಡೇಹಳ್ಳಿಯಲ್ಲಿ ಅನೇಕ ಬಡವರು ಇದ್ದಾರೆ. ಜತೆಗೆ ವಿಧವೆಯರೂ ಅಂಗನವಾಡಿ ಶಿಕ್ಷಕಿಯ ಹುದ್ದೆಯ ಆಕಾಂಕ್ಷಿತರಾಗಿದ್ದಾರೆ. ಆದರೆ, ಅಧಿಕಾರಿಗಳು ಸರ್ಕಾರಿ ಮಾರ್ಗಸೂಚಿ ಗಾಳಿಗೆ ತೂರಿ ಹೊಸಹಳ್ಳಿಯ ಸವಿತಾ ಅವರನ್ನು ನೇಮಿಸಿದ್ದಾರೆ. ನಮ್ಮ ಊರಿನವರನ್ನೇ ನೇಮಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಎಡೇಹಳ್ಳಿ ಅಂಗನವಾಡಿ ಶಿಕ್ಷಕಿ ಹುದ್ದೆ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಈ ಹುದ್ದೆಯ ನೇಮಕಾತಿಗೆ ಸ್ಥಳೀಯರಿಗೆ ಆದ್ಯತೆ ನೀಡುವಂತೆ ಶಾಸಕರೇ ಹೇಳಿದ್ದರೂ, ಸುಳ್ಳು ದಾಖಲೆ ಸೃಷ್ಟಿಸಿ, ಸವಿತಾ ಅವರನ್ನು ನೇಮಿಸಲಾಗಿದೆ. ಈ ಹುದ್ದೆಗೆ ನಮ್ಮ ಊರಿನವರನ್ನು ನೇಮಿಸದಿದ್ದರೆ, ಹೋರಾಟ ಅನಿವಾರ್ಯ. ತೀರ್ಥಪ್ರಸಾದ್, ಗ್ರಾಪಂ ಮಾಜಿ ಅಧ್ಯಕ್ಷ ಸರ್ಕಾರದ ಆದೇಶದ ಮೇರೆಗೆ ನಿಯಮ ಅನುಸಾರವೇ ಅಂಗನವಾಡಿ ಕಾರ್ಯಕರ್ತೆಯನ್ನು ನೇಮಿಸಲಾಗಿದೆ. ಲತಾ, ಸಿಡಿಪಿಒ, ನೆಲಮಂಗಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net