ಅಂಗನವಾಡಿ ಮಕ್ಕಳಿಗೆ ಸಿರಿಧಾನ್ಯ ಆಹಾರ ನೀಡಲು ಆಗ್ರಹ

Published on

ಮೈಸೂರು: ಶಾಲೆ ಹಾಗೂ ಅಂಗನವಾಡಿಗಳಲ್ಲಿ ಮಕ್ಕಳಿಗೆ ವಾರದಲ್ಲಿ 2ರಿಂದ 3 ಬಾರಿಯಾದರೂ ಸಿರಿಧಾನ್ಯದ ಆಹಾರ ನೀಡಬೇಕು ಎಂದು ಪೀಪಲ್ ಟ್ರೀ ಸಂಸ್ಥೆ ಹಾಗೂ ಭಾರತೀಯ ಸಿರಿಧಾನ್ಯ ಸಹೋದರಿಯರ ಬಳಗ ಸರ್ಕಾರವನ್ನು ಆಗ್ರಹಿಸಿದೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಉಂಟಾಗುತ್ತಿರುವ ಕಾರಣ, ಸಿರಿಧಾನ್ಯವನ್ನು ನೀಡಬೇಕು. ಈ ಮೂಲಕ ಮಕ್ಕಳ ಆರೋಗ್ಯ ಕಾಪಾಡುವ ಜತೆಗೆ ಸಿರಿಧಾನ್ಯ ಬೆಳೆಗಾರರಿಗೂ ಅನುಕೂಲವಾಗುತ್ತದೆ ಎಂದು ಪೀಪಲ್ ಟ್ರೀ ಸಂಸ್ಥೆ ಸಂಯೋಜಕ ಚನ್ನಕೇಶವ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹವಾಮಾನ ವೈಪರೀತ್ಯದಿಂದ ಮುಂದೆ ಭತ್ತ, ರಾಗಿ ಬೆಳೆ ಸರಿಯಾಗಿ ಇಳುವರಿ ದೊರೆಯುವುದಿಲ್ಲ ಎನ್ನುವ ಆತಂಕ ಮೂಡಿಸುತ್ತಿದೆ. ಹೀಗಾಗಿ ಪೂರ್ವಿಕರು ಬೆಳೆದುಕೊಂಡು ಬರುತ್ತಿದ್ದ ಸಿರಿಧಾನ್ಯದತ್ತ ರೈತರು ಚಿತ್ತ ಹರಿಸಿದ್ದಾರೆ. ಎಚ್.ಡಿ.ಕೋಟೆಯಲ್ಲಿ ರೈತ ಮಹಿಳೆಯನ್ನು ಒಂದುಗೂಡಿಸಿ ಸಿರಿಧಾನ್ಯ ಬಳಗ ನಿರ್ಮಿಸಲಾಗಿದೆ ಎಂದರು.
ಈಗ ಸುಮಾರು 400 ಎಕರೆ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯುತ್ತಿದ್ದರೂ ಮಾರುಕಟ್ಟೆ ಸಮಸ್ಯೆ ಉಂಟಾಗುತ್ತಿದೆ. ಅಲ್ಲದೆ ಸಂಸ್ಕರಣೆ ಮಾಡಲು ನಮ್ಮಲ್ಲಿ ಯಾವುದೇ ಸೌಲಭ್ಯ ಇಲ್ಲ. ಆದ್ದರಿಂದ ಹೋಬಳಿಗೆ ಒಂದಾದರೂ ಸಿರಿಧಾನ್ಯ ಸಂಸ್ಕರಣಾ ಘಟಕ, ಯಂತ್ರಗಳನ್ನು ನೀಡಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಕೋರಿದರು.
ಸಿರಿಧಾನ್ಯ ಬೆಳೆಗಾರರನ್ನು ಪ್ರೋತ್ಸಾಹಿಸಲು ವಿಶೇಷ ಸಹಾಯಧನ ನೀಡಬೇಕು. ಪಡಿತರ ವ್ಯವಸ್ಥೆಯಡಿ ಅಕ್ಕಿ, ರಾಗಿಯಂತೆ ಸಿರಿಧಾನ್ಯಗಳಾದ ನವಣೆ, ಸಾಮೆ ಸೇರಿದಂತೆ ಇನ್ನಿತರೆ ಧಾನ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಭಾರತೀಯ ಸಿರಿಧಾನ್ಯ ಸಹೋದರಿಯರ ಬಳಗದ ಸಂಯೋಜಕಿ ಸಿ.ಲತಾ, ಹೊಸಮಾಳ ಸವಿತಾ, ಸತ್ತಿಗೆಹುಂಡಿ ಸಣ್ಣರಾಮಮ್ಮ, ಶೀರನಹುಂಡಿ ವಸಂತ, ಸೋಗಳ್ಳಿ ಜ್ಯೋತಿ, ಹೊಸಮಾಳ ಚಿಕ್ಕಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net