

ಮೈಸೂರು: ಜಿಲ್ಲೆಯಲ್ಲಿ ಆರು ವರ್ಷದೊಳಗಿನ ಮಕ್ಕಳ ಹಾಜರಾತಿ ಕಡಿಮೆಯಾಗಲು ಕಾರಣವೇನು? ಇವರು ಎಲ್ಲಿ ಹೋಗಿದ್ದಾರೆ, ಅವರನ್ನು ಏಕೆ ಟ್ರ್ಯಾಕ್ ಮಾಡಲಿಲ್ಲ? ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಪ್ರಶ್ನಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಮೂರು ವರ್ಷದ ಮತ್ತು ಆರು ವರ್ಷದೊಳಗಿನ ಮಕ್ಕಳ ಹಾಜರಾತಿ ವ್ಯತ್ಯಾಸವನ್ನು ಗಮನಿಸಿ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಿ.ಬಸವರಾಜು ಅವರು ಜಿಲ್ಲೆಯಲ್ಲಿ 2,933 ಅಂಗನವಾಡಿ ಕೇಂದ್ರಗಳಿದ್ದು, 1,57,128 ಫಲಾನುಭವಿಗಳಿದ್ದಾರೆ. 3 ವರ್ಷದೊಳಗಿನ 75536, 3-6 ವರ್ಷದೊಳಗಿನ 47796, ಗರ್ಭಿಣಿಯರು-14880, ಬಾಣಂತಿಯರು-13157 ಜನರಿದ್ದಾರೆ.
ಈ ಪೈಕಿ ಕೊಡಗು ಜಿಲ್ಲೆಗೆ, ಕೇರಳಕ್ಕೆ ಕೂಲಿಗೆ ಪಾಲಕರೊಂದಿಗೆ ಮಕ್ಕಳು ಹೋಗುತ್ತಾರೆ ಎನ್ನುವ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿ ಎಸ್.ಸೆಲ್ವಕುಮಾರ್, ಹಾಗಾದರೆ, ಬೇರೆ ಕಡೆಯಿಂದ ಬಂದವರು ಇಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು ಅಲ್ಲವೇ? ನೀವು ಸರಿಯಾಗಿ ಟ್ರ್ಯಾಕ್ ಮಾಡಿಲ್ಲ ಎಂದರು.
ಅಂಗನವಾಡಿ ಕೇಂದ್ರಗಳಲ್ಲಿ ಮೂರು ಮತ್ತು ಆರು ವರ್ಷದೊಳಗಿನ ಮಕ್ಕಳ ಹಾಜರಾತಿ ವ್ಯತ್ಯಾಸವಾಗಿರುವ ಕುರಿತು ಮರು ಪರಿಶೀಲನೆ ನಡೆಸಿ ಒಂದು ವಾರದೊಳಗೆ ವರದಿ ನೀಡಬೇಕು ಎಂದು ಸೂಚಿಸಿದರು.
ಜಿಪಂ ಸಿಇಒ ಎಸ್.ಯುಕೇಶ್ ಕುಮಾರ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಜನಿಸಿದ ಮಗುವಿನ ಸಂಖ್ಯೆಯ ವಿವರ ಇರುತ್ತದೆ. ಕಳೆದ ಆರು ವರ್ಷಗಳಲ್ಲಿ ಜನಿಸಿರುವ ಮಕ್ಕಳ ವಿವರ ಪಡೆದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಪರಿಶೀಲಿಸಬೇಕು ಎಂದು ನಿರ್ದೇಶಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್.ರವಿ ಮಾತನಾಡಿ, ವಾಡಿಕೆ ಮಳೆಗಿಂತ ಜನವರಿಯಿಂದ ಜುಲೈ ತಿಂಗಳವರೆಗೆ 443 ಮಿ.ಮೀಟರ್ ಮಳೆಯಾಗಿದೆ. ಜೂನ್‌ನಲ್ಲಿ 33 ಮಿ.ಮೀಟರ್, ಜುಲೈನಲ್ಲಿ 22 ಮಿ.ಮೀಟರ್ ಮಳೆ ಕೊರತೆಯಾಗಿದೆ. ತಿಂಗಳಾಂತ್ಯದವರೆಗೆ ಮಳೆ ಬೀಳದಿದ್ದರೆ ಒಂದಿಷ್ಟು ರಾಗಿ ಬೆಳೆ ಇಳುವರಿ ಮೇಲೆ ಪರಿಣಾಮ ಬೀರಲಿದೆ. ರಸಗೊಬ್ಬರ, ಬಿತ್ತನೆ ಬೀಜದ ಕೊರತೆ ಇಲ್ಲ. 91,568 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆಯಲ್ಲಿ 50809 ಮೆಟ್ರಿಕ್ ಟನ್ ದಾಸ್ತಾನು ಇದೆ ಎಂದರು.
ಎಚ್.ಡಿ.ಕೋಟೆ, ಸರಗೂರು ತಾಲೂಕಿನಲ್ಲಿ ಮುಸುಕಿನ ಜೋಳಕ್ಕೆ ಬೂದುರೋಗ ಕಾಣಿಸಿಕೊಂಡಿದ್ದು, ಶುಂಠಿ ಬೆಳೆಗೂ ರೋಗ ಕಾಣಿಸಿಕೊಂಡಿದೆ. ಇದನ್ನು ನಿವಾರಿಸಲು ರೈತರಿಗೆ ಔಷಧ ಕೊಡಲಾಗುತ್ತಿದೆ ಎಂದರು.
ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಕ್ರಮ; ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಜವರೇಗೌಡ ಮಾತನಾಡಿ, ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಸರ್ಕಾರ 20 ಅಂಶಗಳ ಹಾಗೂ ಜಿಲ್ಲೆಯಲ್ಲಿ 25 ಅಂಶಗಳ ಕಾರ್ಯಕ್ರಮ ರೂಪಿಸಲಾಗಿದೆ.
ಪ್ರತಿ ಪಾಠ ಮುಗಿದ ಮೇಲೆ ಸಣ್ಣ ಟೆಸ್ಟ್ ನಡೆಸಿ ಅದನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವಂತೆ ಸರ್ಕಾರ ಸೂಚನೆ ನೀಡಿದ್ದು, ಈ ಪ್ರಕಾರ ಕ್ರಮ ವಹಿಸಲಾಗಿದೆ. ಕೆಳಹಂತದಿಂದ ರಾಜ್ಯಮಟ್ಟದ ಅಧಿಕಾರಿಗಳ ತನಕವೂ ಹೊಣೆಗಾರಿಕೆಯನ್ನು ನೀಡಲಾಗಿದೆ. ಟೆಸ್ಟ್ ನಡೆಸಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವಂತೆ ಹೇಳಿರುವುದರಿಂದ ಕಾರ್ಯಭಾರ ಜಾಸ್ತಿಯಾಗಿದೆ ಎಂದು ಶಿಕ್ಷಕರು ಹೇಳುತ್ತಿದ್ದಾರೆ. ಸರ್ಕಾರದ ಆದೇಶ ಪಾಲಿಸಬೇಕಿದೆ ಎನ್ನುವ ಸೂಚನೆ ಕೊಡಲಾಗಿದೆ ಎಂದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಜಿಪಂ ಉಪ ಕಾರ್ಯದರ್ಶಿಗಳಾದ ಡಾ.ಎಂ.ಕೃಷ್ಣರಾಜು, ಸವಿತಾ, ಮುಖ್ಯ ಯೋಜನಾಧಿಕಾರಿ ಕೆ.ಬಿ.ಪ್ರಭುಸ್ವಾಮಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಯೋಜನಾಧಿಕಾರಿ ಎಂ.ಕೆ.ಮಲ್ಲೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಭಾಸ್ಕರ್, ಡಿಎಚ್‌ಒ ಡಾ.ಪಿ.ಎಂ.ಕುವಾರಸ್ವಾಮಿ, ಪಶು ಸಂಗೋಪನ ಮತ್ತು ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕ ನಾಗರಾಜು ಮೊದಲಾದ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿಯನ್ನು ವಿವರಿಸಿದರು.
ಅಕ್ಷರ ದಾಸೋಹ ಯೋಜನೆ ಸಮನ್ವಯಾಧಿಕಾರಿ ಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿ 1,65,513 ಮಕ್ಕಳಿದ್ದು, 110 ಶಾಲೆಗಳಲ್ಲಿ 19710 ಮಕ್ಕಳಿಗೆ ಅಕ್ಷಯಪಾತ್ರೆ ವತಿಯಿಂದ ಬಿಸಿಯೂಟ ನೀಡಲಾಗುತ್ತಿದೆ. ಮಕ್ಕಳಿಗೆ 5 ದಿನ ಹಾಲು, ಮೂರು ದಿನಗಳು ರಾಗಿ ಮಾಲ್ಟ್, 6 ದಿನಗಳು ಮೊಟ್ಟೆ ನೀಡಲಾಗುತ್ತಿದೆ.
ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ರಾಜೀವ್‌ಗಾಂಧಿ ಆವಾಸ್ ಯೋಜನೆಯಡಿ ಅನುಮೋದನೆಗೊಂಡಿರುವ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಒಂದು ವರ್ಷದೊಳಗೆ ಮುಗಿಸುವ ಗುರಿಯನ್ನು ಕೊಡಲಾಗಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾಧಿಕಾರಿ ವಿ.ಪ್ರಿಯದರ್ಶಿನಿ ಹೇಳಿದರು.
9720 ಮನೆಗಳು ಮಂಜೂರಾಗಿದ್ದು, 6905 ಪೂರ್ಣಗೊಂಡಿದ್ದು, 907 ಮನೆಗಳು ಪ್ರಗತಿ, 1908 ಮನೆಗಳು ಪ್ರಾರಂಭವಾಗಬೇಕಿದೆ. ಗುಂಪು ಮನೆ ಯೋಜನೆಯಡಿ ಮಂಡಕಳ್ಳಿಯಲ್ಲಿ 2448, ಲಲಿತಾದ್ರಿಪುರದಲ್ಲಿ 1440, ಕೆ.ಆರ್.ನಗರ ಪುರಸಭೆಯಲ್ಲಿ 843 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಅವರು ಜಿಲ್ಲೆಯಲ್ಲಿ 137 ಗ್ರಾಮಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಲಾಗಿದೆ. ಹಕ್ಕುಪತ್ರ, ಭೂ ಸಾಗುವಳಿದಾರರ ಅರ್ಜಿಗಳನ್ನು ಇತ್ಯರ್ಥಪಡಿಸಲು ಕಾಲಮಿತಿ ಹಾಕಿಕೊಳ್ಳಲಾಗಿದೆ ಎಂದರು.
ಗ್ರಾಮೀಣ ನೀರು ಸರಬರಾಜು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಎ.ಎಸ್.ರಂಜಿತ್‌ಕುಮಾರ್ ಮಾತನಾಡಿ, 1909 ಕುಡಿಯುವ ನೀರಿನ ಕಾಮಗಾರಿಗಳಲ್ಲಿ 1580 ಪೂರ್ಣವಾಗಿದ್ದು, 4.71 ಲಕ್ಷ ಮನೆಗಳಲ್ಲಿ 4.45 ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲಾಗಿದೆ. ಶೀಘ್ರದಲ್ಲೇ ಶೇ.100ರಷ್ಟು ಮುಗಿಯಲಿದೆ. ಹರ್ ಘರ್ ಜಲ್ ಗ್ರಾಮಗಳಲ್ಲಿ 478 ಗ್ರಾಮಗಳನ್ನು ಘೋಷಣೆ ಮಾಡಲಾಗಿದೆ ಎಂದರು.
ಜಿಲ್ಲೆಯ ಎಲ್ಲ ಮನೆಗಳಿಗೂ ನಲ್ಲಿ ಸಂಪರ್ಕ ಕಲ್ಪಿಸಿದರೆ ಶೇ.100ರಷ್ಟು ಮನೆಗಳಿಗೆ ನೀರು ಒದಗಿಸಿದಂತಾಗುತ್ತದೆ ಎಂದು ವಿವರಿಸಿದರು.