ಅಂಗನವಾಡಿ ನೌಕರರಿಗೆ ಭದ್ರತೆ ಕಲ್ಪಿಸುವಲ್ಲಿ ಸರ್ಕಾರ ವಿಫಲ

21-klr-2
Published on

ಕೋಲಾರ: ಅಂಗನವಾಡಿ ನೌಕರರ ಬದುಕಿಗೆ ಭದ್ರತೆ ಒದಗಿಸುವಲ್ಲಿ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಅಂಗನವಾಡಿ ನೌಕರರ ಸಂಘದ ಸಮಿತಿ ಅಧ್ಯಕ್ಷೆ ಎಸ್. ವರಲಕ್ಷ್ಮೀ ಟೀಕಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಅಂಗನವಾಡಿ ನೌಕರರ ಹಾಗೂ ಕಾರ್ಯಕರ್ತೆಯರ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತರ ಶ್ರೇಯಾಭಿವೃದ್ಧಿಗೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅಂಗನವಾಡಿಯ ಮೂಲಸೌಕರ್ಯದ ವೃದ್ಧಿಗಾಗಿ ರಚಿಸಿರುವ ಶಾಸಕರ ಸಮಿತಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ನಕಾರಾತ್ಮಕ ಅಂಶಗಳನ್ನೇ ಗುರುತಿಸುತ್ತಿದೆಯೇ ಹೊರತು, ಅಂಗನವಾಡಿ ಸಮಗ್ರ ಅಭಿವೃದ್ಧಿಗೆ ಬೇಕಾದ ಯಾವ ಶಿಫಾರಸನ್ನೂ ಸರ್ಕಾರಕ್ಕೆ ನೀಡುತ್ತಿಲ್ಲ ಎಂದರು.

ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸರ್ಕಾರ ಸರಬರಾಜು ಮಾಡುವ ಆಹಾರ ಪದಾರ್ಥಗಳಲ್ಲಿ ಕಮಿಷನ್ ಪಡೆದ ಉದಾರಣೆಗಳಿವೆ. ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ಹಾಜರಾತಿ ಹೆಚ್ಚು ಕಡಿಮೆ ಮಾಡಿದಲ್ಲಿ ಅವರ ವಿರುದ್ಧ ಕ್ರಮ ಜರುಗಿಸಿ ಕೆಲಸದಿಂದ ವಜಾ ಮಾಡುತ್ತಾರೆ. ಆದರೆ, ಸಿಎಂ ಪಕ್ಕದಲ್ಲೇ ಕುಳಿತು ಕೋಟಿ ಕೋಟಿ ಲೂಟಿ ಮಾಡುವವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಕನಿಷ್ಠ ಕೂಲಿ ಜತೆಗೆ ಸರ್ಕಾರದ ಎಲ್ಲ ಸೌಲಭ್ಯ ನೀಡಬೇಕು. ಎಲ್‌ಕೆಜಿ ಮತ್ತು ಯುಕೆಜಿಯನ್ನು ಅಂಗನವಾಡಿಯಲ್ಲಿ ಆರಂಭಿಸಬೇಕು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ದ್ವಿಮುಖ ನೀತಿಯ ವಿರುದ್ಧ ಜ.10ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟ ಅವಧಿ ಧರಣಿ ನಡೆಸಲಾಗುವುದು ಎಂದರು.

ಸಿಐಟಿಯು ಜಿಲ್ಲಾ ಗೌರವಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ದೇಶದಲ್ಲಿ ಸರ್ಕಾರಗಳು ಕಾರ್ಮಿಕರನ್ನು ಬಳಸಿಕೊಂಡು ಅಭಿವೃದ್ಧಿ ನಡೆಸುತ್ತವೆ. ಅದೇ ಕಾರ್ಮಿಕರಿಗೆ ಸೌಲಭ್ಯ ನೀಡಲು ಹಿಂದೇಟು ಹಾಕುತ್ತಾರೆ. ಹೋರಾಟದ ಮೂಲಕವಷ್ಟೇ ಸೌಲಭ್ಯ ಪಡೆಯಲು ಸಾಧ್ಯ ಎಂದರು. ಅಂಗನವಾಡಿ ನೌಕರರ ಸಂಘದ ಜಿಲ್ಲಾ ಮುಖಂಡರಾದ ಈಶ್ವರಮ್ಮ, ಲೋಕೇಶ್ವರಿ, ಕಲ್ಪನಾ, ಲಕ್ಷ್ಮೀದೇವಮ್ಮ, ಸುಜಾತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net