ಕರ್ನಾಟಕದ ಭೂಮಿಯ ಹಕ್ಕುಪತ್ರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಮಹತ್ವದ ಯೋಜನೆ ಇದಾಗಿದ್ದು, ಇದರಿಂದ ಲಕ್ಷಾಂತರ ಜನರಿಗೆ ತಮ್ಮ ಭೂಮಿಯ ಅಧಿಕೃತ ಮಾಲೀಕತ್ವ ಸಿಗಲಿದೆ. ಹಕ್ಕುಪತ್ರವು ಕರ್ನಾಟಕ ಸರ್ಕಾರವು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ನೀಡುವ ಆಸ್ತಿಗಳ ಸ್ವಾಮ್ಯದ ಪತ್ರವಾಗಿದೆ. ಸರಕಾರದ ಸ್ವಾಧೀನದಲ್ಲಿರುವ ಅದರೆ ಬಡವರಿಗಾಗಿ ಒದಗಿಸಿದ ಮನೆಗಳಿಗೆ ಇಂತಹ ಪತ್ರವನ್ನು ಸರ್ಕಾರ ನೀಡುತ್ತದೆ ಎಂದು ಹೇಳಿದರು.
ನಮ್ಮ ಸರ್ಕಾರ ೨೦೦೦ ನಿವೇಶನಕ್ಕಾಗಿ ೪೨ ಎಕರೆ ಜಮೀನನ್ನು ಗುರುತಿಸಿ ರೈತರಿಗೆ, ಬಡವರಿಗೆ ಹಂಚಲು ಮುಂದಾಗಿದೆ. ೧೦ ಕೋಟಿ ರೂ. ವೆಚ್ಚದ ಡಾಂಬರೀಕರಣ ಕಾಮಗಾರಿಯನ್ನು ಮಳೆ ನಿಂತ ಮೇಲೆ ಪ್ರಾರಂಭ ಮಾಡಲಾಗುತ್ತದೆ. ಚಿಕ್ಕಮಗಳೂರಿನಲ್ಲಿ ಇನ್ನೂ ಒಂದೂವರೆ ವರ್ಷದಲ್ಲಿ ೨೦ ಕೋಟಿ ರೂ. ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸಲಾಗುತ್ತದೆ. ಜನರ ತೆರಿಗೆ ಹಣದಿಂದ ಜನರ ಬಾಳನ್ನು ಬೆಳಕಾಗಿಸುವ ಕೆಲಸ ನಾವು ಮಾಡುತ್ತಿದ್ದೇವೆ ಎಂದು ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಐದು ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದು ಜನರ ಅಭಿವೃದ್ದಿಗೆ ಸಹಕಾರಿಯಾಗಿದೆ. ನಮ್ಮ ಸರ್ಕಾರದ ಗುರಿ ನಮ್ಮ ದೇಶದ ಅಭಿವೃದ್ಧಿ ಜೊತೆಗೆ ಜನರನ್ನು ಕೂಡ ಅಭಿವೃದ್ದಿಪಡಿಸುವ ಕೆಲಸ ನಾವು ಮಾಡಲು ಮುಂದಾಗಿದ್ದೇವೆ ಎಂದು ಹೇಳಿದರು.
ಈ ದೇಶಕ್ಕೆ, ಬೇರೆ-ಬೇರೆ ರಾಜ್ಯಕ್ಕೆ, ವಿಶ್ವ ಸಂಸ್ಥೆಯು ಮೆಚ್ಚುವಂತಹ ಪಂಚ ಗ್ಯಾರಂಟಿಯನ್ನು ನಾವು ಜಾರಿಗೆ ತಂದಿದ್ದೇವೆ. ನಮ್ಮ ಜಿಲ್ಲೆಯಲ್ಲಿ ೨,೬೧,೪೧೫ ಕುಟುಂಬದ ಯಜಮಾನಿಯರಿಗೆ ತಲಾ ರೂ.೨,೦೦೦ ದಂತೆ ಪ್ರತಿ ತಿಂಗಳು ೫೨.೮೦ ಕೋಟಿ ರೂ.ಗಳನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುತ್ತಿದೆ. ಇದರ ಮೊತ್ತ ೯೯೩ ಕೋಟಿ ಆಗಿದೆ ಎಂದು ಹೇಳಿದರು. ನಮ್ಮ ಜಿಲ್ಲೆಯಲ್ಲಿ ಹೆಚ್ಚು ಮಳೆ ಇರುವುದರಿಂದ ನಗರದಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಾವು ಈಗಲೇ ಎಚ್ಚರ ವಹಿಸಬೇಕು. ಘನ ತ್ಯಾಜ್ಯಗಳ ಕಸವನ್ನು ಗ್ರಾಮ ಪಂಚಾಯಿತಿಗಳಿಗೆ ಕನಿಷ್ಟ ೨ ಎಕರೆ ಜಾಗವನ್ನು ಸರ್ಕಾರ ನೀಡಿದರೆ, ಇನ್ನೂ ೩೦ ವರ್ಗಗಳಲ್ಲಿ ನಾವು ಘನ ತ್ಯಾಜ್ಯ ಸಮಸ್ಯೆಯಿಂದ ಮುಕ್ತರಾಗಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೂಡಿಗೆರೆ ಶಾಸಕಿ ನಯನ ಮೋಟಮ್ಮ, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್, ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ತಾಲ್ಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಂ.ಮಲ್ಲೇಶಸ್ವಾಮಿ, ತಹಸೀಲ್ದಾರ್ ರೇಷ್ಮಾ ಮತ್ತಿತರರಿದ್ದರು.