

ಚಿತ್ರದುರ್ಗ: ತಾಲೂಕಿನ ಮಾಡನಾಯಕನ ಹಳ್ಳಿಯ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಅವರು ಸೋಮವಾರದಂದು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮದ ಎ, ಬಿ ಹಾಗೂ ಸಿ ಅಂಗನವಾಡಿಗಳಲ್ಲಿ ಪರಿಶೀಲಿಸಿದರು. ಖಾಸಗಿ ಕಟ್ಟಡದಲ್ಲಿರುವ ಅಂಗನವಾಡಿಗೆ ನಿಯಮಾನುಸಾರ ಮೂಲಸೌಕರ್ಯ ಒದಗಿಸಿಲ್ಲ. ಕೇಂದ್ರಗಳೊಳಗೆ ಶೌಚಾಲಯ ನಿರ್ಮಿಸಿರುವುದು ಕೂಡ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿನ ಅಂಗನವಾಡಿ ಕೇಂದ್ರದ ಕಟ್ಟಡಗಳು ಪ್ರಸ್ತುತ ನಡೆಸಲು ಸುರಕ್ಷಿತವಿಲ್ಲ ಎಂಬುದಾಗಿ ಬೆಂಗಳೂರಿನ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಗಮನಕ್ಕೆ ತರುವುದಾಗಿ ಹೇಳಿದರು.
ಹೈಕೋಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರಿಂದಾಗಿ ಅದರನ್ವಯ ಚಿತ್ರದುರ್ಗ ಜಿಲ್ಲೆಯ ಎಲ್ಲ ಅಂಗನವಾಡಿಗಳಿಗೆ ಭೇಟಿ ನೀಡಿ, ಅಲ್ಲಿನ ಕಟ್ಟಡ ಪರಿಸ್ಥಿತಿ, ಪೌಷ್ಠಿಕ ಆಹಾರ ಪೂರೈಕೆ ಸೇರಿ ವಸ್ತುಸ್ಥಿತಿ ಕುರಿತು ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದು, ದಿಢೀರ್ ಭೇಟಿಗೆ ಕಾರಣವಾಗಿದೆ.