

ಹನೂರು: ಗುಣಮಟ್ಟದ ಬೆಲ್ಲವನ್ನು ಪೂರೈಸುವುದರ ಮೂಲಕ ಆಹಾರ ಪದಾರ್ಥಗಳ ತೂಕದಲ್ಲಿ ವ್ಯತ್ಯಾಸವಾಗದಂತೆ ಎಚ್ಚರ ವಹಿಸಬೇಕು ಎಂದು ಶಾಸಕ ಆರ್.ನರೇಂದ್ರ ಅವರು ಸಿಡಿಪಿಒ ನಾಗೇಶ್ ಅವರಿಗೆ ಸೂಚನೆ ನೀಡಿದರು.
ಬೈಲೂರು ಸಮೀಪದ ಬಿ.ಜಿ.ದೊಡ್ಡಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿದ ಶಾಸಕರು, ಮಕ್ಕಳ ಹಾಜರಾತಿ ಹಾಗೂ ದಾಖಲಾತಿಯ ಬಗ್ಗೆ ಮಾಹಿತಿ ಪಡೆದುಕೊಂಡು ಮಕ್ಕಳ ಕಲಿಕೆಯನ್ನು ಪರೀಕ್ಷಿಸಿದರು.
ಈ ವೇಳೆ ಆಹಾರ ಪದಾರ್ಥಗಳನ್ನು ವೀಕ್ಷಿಸಿದಾಗ ಬೆಲ್ಲ ಗುಣಮಟ್ಟದಿಂದ ಕೂಡಿಲ್ಲದಿರುವುದು ಕಂಡುಬಂತು. ಕೂಡಲೇ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ನಾಗೇಶ್ ಅವರಿಗೆ ಕರೆ ಮಾಡಿ ತಾಲೂಕಿನ ಕೆಲ ಅಂಗನವಾಡಿ ಕೇಂದ್ರಗಳಲ್ಲಿ ಬೆಲ್ಲ ಗುಣಮಟ್ಟದಿಂದ ಕೂಡಿಲ್ಲದಿರುವ ಬಗ್ಗೆ ಆರೋಪ ಕೇಳಿಬಂತು. ಇದೀಗ ಬಿ.ಜಿ.ದೊಡ್ಡಿಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಬೆಲ್ಲ ಗುಣಮಟ್ಟದಿಂದ ಕೂಡಿಲ್ಲದಿರುವುದು ದೃಢಪಟ್ಟಿದೆ. ಇಂಥ ಬೆಲ್ಲವನ್ನು ಆಹಾರ ತಯಾರಿಕೆಗೆ ಬಳಕೆ ಮಾಡಿದರೆ ಮಕ್ಕಳ ಆರೋಗ್ಯದ ಸ್ಥಿತಿ ಏನು? ಆದ್ದರಿಂದ ಈ ಬಗ್ಗೆ ಕೂಡಲೇ ಅಗತ್ಯ ಕ್ರಮಕೈಗೊಂಡು ಗುಣಮಟ್ಟದ ಬೆಲ್ಲವನ್ನು ಪೂರೈಸಬೇಕು ಎಂದು ತಾಕೀತು ಮಾಡಿದರು.
ತಹಸೀಲ್ದಾರ್ ಆನಂದಯ್ಯ, ಆರ್‌ಐ ಮಾದೇಶ್, ಮುಖಂಡರಾದ ಜಗದೀಶ್, ಪುಟ್ಟವೀರನಾಯ್ಕ ಇತರರು ಇದ್ದರು.